ಬೆಂಗಳೂರು: ಕಾಂಗ್ರೆಸ್ ರೋಷನ್ ಬೇಗ್ ಬಿಜೆಪಿಗೆ ಹೋಗುವುದು ಅವರ ತೀರ್ಮಾನ, ಹೋದರೆ ಹೋಗಲಿ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಸವಾಲು ಎಸೆದಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ಶಾಸಕ ರೋಷನ್ ಬೇಗ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾಗರಾಜ್ ಅವರು, ರೋಷನ್ ಬೇಗ ಸಿದ್ದರಾಮಯ್ಯ ಸರ್ಕಾರದಲ್ಲಿ ಐದು ವರ್ಷ ಅಧಿಕಾರ ಅನುಭವಿಸಿದ್ದಾರೆ. ಅಧಿಕಾರ ಅನುಭವಿಸಿಯೂ ಈ ರೀತಿ ಮಾತನಾಡುವುದು ಸರಿಯಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಅಹಂಕಾರ, ಒಡೆದು ಆಳಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬಂದಿದೆ – ರೋಷನ್ ಬೇಗ್ ಕಿಡಿ
ಈಗಾಗಲೇ ರೋಷನ್ ಬೇಗ್ ಅವರು ಮೂರು-ನಾಲ್ಕು ಬಾರಿ ಸಚಿವರಾಗಿದ್ದಾರೆ. ಹೀಗಾಗಿ ಬೇರೆಯವರಿಗೂ ಅವಕಾಶ ಸಿಗಬೇಕು. ಇನ್ನೊಬ್ಬರಿಗೆ ಅವಕಾಶ ಸಿಕ್ಕಿತ್ತು ಎಂದು ಕೋಪ ಮಾಡಿಕೊಳ್ಳಬಾರದು. ಬಿಜೆಪಿಗೆ ಹೋಗುವುದು ಅವರ ತೀರ್ಮಾನ ನಾವೇನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ಹೋಗಿರುವವರು ಏನಾಗಿದ್ದಾರೆ ಎಂದು ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ ಎಂದು ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಷನ್ ಬೇಗ್ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ಲಾಪ್ ಶೋ, ದಿನೇಶ್ ಗುಂಡೂರಾವ್ ಅವರು ಸೇರಿ ಈ ಗತಿಗೆ ತಂದಿದ್ದಾರಲ್ಲ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.