– ಸಚಿವ ಎಂಟಿಬಿ ನಾಗರಾಜ್ ಸಂಪತ್ತು ಕುರಿತು ಸಿದ್ದರಾಮಯ್ಯ ಹಾಸ್ಯ
– ಇನ್ನೊಂದು ಐದು ವರ್ಷ ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ- ಸಿದ್ದರಾಮಯ್ಯ
ಬೆಂಗಳೂರು: ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತನೋ ಹಾಗೇ ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಜಪ ಕಾಣಿಸುತ್ತದೆ. ನಾನು ಯಾವಾಗಲೂ ಸಿದ್ದರಾಮಯ್ಯ ಅವರ ಜಪ ಮಾಡುತ್ತೇನೆ ಎಂದು ಹೇಳಿದರು.
Advertisement
ಸಚಿವನಾಗಬೇಕು ಇಲ್ಲವೇ ರಾಜಕೀಯ ನಿವೃತ್ತಿ ತಗೆದುಕೊಳ್ಳಬೇಕು ಅಂತ ತೀರ್ಮಾನಿಸಿದ್ದೆ. ಅಷ್ಟೇ ಅಲ್ಲದೆ ನಾನು ಇನ್ನುಮುಂದೆ ಚುನಾವಣೆಗೆ ನಿಲ್ಲಲ್ಲ ಎನ್ನುವ ನಿರ್ಧಾರ ಕೈಗೊಂಡಿದ್ದೆ. ಹೀಗಾಗಿ ಈ ಬಾರಿಯೇ ಸಚಿವನಾಗಬೇಕು ಎನ್ನುವ ಕನಸು ಕಂಡಿದ್ದೆ. ನನ್ನ ಕನಸನ್ನು ಅವರು ಈಡೇರಿಸಿದರು ಎಂದು ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ಇದನ್ನೂ ಓದಿ: ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್
Advertisement
Advertisement
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ವರ್ಗದವರಿಗೂ ಉತ್ತಮ ಕಾರ್ಯಕ್ರಮ ಕೊಟ್ಟಿದ್ದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಿದ್ದರಾಮಯ್ಯ ಹೊರತು ಯಾವುದೇ ಮಣ್ಣಿನ ಮಕ್ಕಳಲ್ಲ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿದ್ದು ಸಿದ್ದರಾಮಯ್ಯ ಹೊರತು ಯಾವುದೇ ಲಿಂಗಾಯತ ಮುಖ್ಯಮಂತ್ರಿ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.
Advertisement
ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಕುರುಬರ ಸಂಘ ಉಳಿಸಿದೆ. ಈ ಹಿಂದೆ ಕುರುಬರ ಸಂಘದಲ್ಲಿ ಇದ್ದವರೇ ಸಂಘವನ್ನು ಮುಳುಗಿಸಲು ಮುಂದಾಗಿದ್ದರು. ಆದರೆ ನನ್ನ ಕಂಡರೆ ಗಡಗಡ ಅಂತ ನಡಗುತ್ತಿದ್ದರು. ಹೀಗಾಗಿ ಅವರ ಕಪಿಮುಷ್ಠಿಯಿಂದ ಸಂಘವನ್ನು ಪಡೆದು ಒಳ್ಳೆಯವರ ಕೈಗೆ ಕೊಟ್ಟೆ. ಅಲ್ಲಿಂದ ಕುರುಬರ ಸಂಘ ಚೆನ್ನಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಕಾಗಿನೆಲೆ ಮಠಕ್ಕಾಗಿ ಹಣ ಸಂಗ್ರಹ ಮಾಡಲು ಶಿವಮೊಗ್ಗಕ್ಕೆ ಹೋಗಿದ್ವಿ. ಈ ವೇಳೆ ಮುಖಂಡರ ಜೊತೆಗೆ ಸಭೆ ನಡೆಸಿ 3 ಲಕ್ಷ ರೂ. ಹಣ ಸಂಗ್ರಹ ಮಾಡಿಕೊಡುವಂತೆ ಕೇಳಿಕೊಂಡಿದ್ದೇವು. ಮೊದಲ ಸಭೆಗೆ ಹಾಜರಾಗಿದ್ದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಹಣ ಕೊಡುವುದಕ್ಕೆ ಹಿಂದೇಟು ಹಾಕಿ ಎರಡನೇ ಸಭೆಗೆ ಪುಣ್ಯಾತ್ಮ ಬರಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ಸಂಘದಿಂದ ಮೆಡಿಕಲ್ ಕಾಲೇಜು ಅರಂಭಿಸಬೇಕು ಎನ್ನುವ ವಿಚಾರವಿತ್ತು. ಅದಕ್ಕೆ ಬೇಕಾಗಿದ್ದ ಅನುಮತಿಯನ್ನು ಸರ್ಕಾರವೂ ನೀಡಿತ್ತು. ಆದರೆ ಕಾಲೇಜು ನಿರ್ಮಿಸಲು 500 ಕೋಟಿ ರೂ.ಗಿಂತ ಅಧಿಕ ಹಣ ಬೇಕಾಗಿತ್ತು. ನಮ್ಮಲ್ಲಿ ಅಷ್ಟೊಂದು ಹಣ ಇರಲಿಲ್ಲ. ಅಷ್ಟೇ ಅಲ್ಲದೆ ಕುರುಬರಲ್ಲಿ ಹೆಚ್ಚು ಶ್ರೀಮಂತರಿಲ್ಲ ಎಂದ ಸಿದ್ದರಾಮಯ್ಯ ಅವರು, ನಮ್ಮ ಸಮುದಾಯದಲ್ಲಿ ಎಂಟಿಬಿ ಒಬ್ಬನೇ ಶ್ರೀಮಂತ ಎಂದು ಹಾಸ್ಯ ಮಾಡಿದರು.
ಸಾರ್ವಜನಿಕ ಆಸ್ತಿ ವಿಷವಿದ್ದಂತೆ. ನನ್ನ ರಾಜಕೀಯ ಬದುಕಿನಲ್ಲಿ ಇಂತಹ ಆಸ್ತಿಯನ್ನು ಮುಟ್ಟಿಲ್ಲ. ಕೆಲವರು ಕುರುಬರ ಸಂಘದ ಹೆಸರಲ್ಲಿ ತಾವೇ ಆಸ್ತಿ ಮಾಡಿಕೊಂಡಿದ್ದಾರೆ ಎಂದ ಅವರು ಸಮಾಜದ ಹೆಸರಲ್ಲಿ ಹಣ ನುಂಗುವವರನ್ನು ಬಹಿಷ್ಕರಿಸಿ ಎಂದು ಮುಖಂಡರಿಗೆ ತಿಳಿಸಿದರು.
ಮೀಸಲಾತಿ ಹಿಂದುಳಿದ ವರ್ಗದವರಿಗೆ ಬೇಕೇಬೇಕು. ಇದರಿಂದ ಸಮಬಲದವರ ಜೊತೆ ಸ್ಪರ್ಧಿಸಬಹುದು. ಜೊತೆಗೆ ಶಾಸಕರು ಹಾಗೂ ಸಂಸದರ ಕ್ಷೇತ್ರಗಳಲ್ಲೂ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ನಾನು ಎಲ್ಲ ಜಾತಿಯ ಬಡವರಿಗೆ ನ್ಯಾಯ ಕೊಡುವ ಪ್ರಯತ್ನ ಮಾಡಿರುವೆ. ಆದರೆ ಅಹಿಂದದವರಿಗೆ ಸ್ವಲ್ಪ ಜಾಸ್ತಿ ಮಾಡಿರಬಹುದು ಎಂದು ಹೇಳಿದರು.
ಟಿಪ್ಪು ಜಯಂತಿ, ಕೆಂಪೇಗೌಡ ಜಯಂತಿ, ಹಡಪದ ಅಪ್ಪಣ್ಣ ಜಯಂತಿ ಮಾಡಿದ್ದು ನಾನೇ. ಕೆಲವು ನಿಗಮಗಳನ್ನು ರಚನೆ ಮಾಡಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ನಮ್ಮ ಅವಧಿಯಲ್ಲಿ ಉತ್ತೇಜನ ಸಿಕ್ಕಿತ್ತು. ಬೆಂಗಳೂರು ನಗರ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು, ರೈತರ ಅಭಿವೃದ್ಧಿಗೆ ಕಾರ್ಯಕ್ರಮ, ಸಾಲಮನ್ನಾ ಮಾಡಿರುವೆ. ನಾನು ಜನರ ಋಣ ತೀರಿಸಿರುವೆ. ನನಗೆ ನನ್ನ ಕೆಲಸಗಳ ಬಗ್ಗೆ ತೃಪ್ತಿ ಇದೆ ಎಂದರು.
ಕೆಲವರು ಹೊಟ್ಟೆ ಕಿಚ್ವಿಗೆ ಸಿದ್ದರಾಮಯ್ಯ ಏನ್ ಮಾಡಿದ ಅಂತಾರೆ. ಇದೆಲ್ಲ ಯಾರು ಮಾಡಿದ್ದು? ಇನ್ನೊಂದು ಐದು ವರ್ಷ ಸಿಕ್ಕಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಆದರೆ ಹೊಟ್ಟೆಕಿಚ್ಚು, ಅಪಪ್ರಚಾರದಿಂದ ಸೋಲಿಸಿಬಿಟ್ಟರು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv