ಬೆಳಗಾವಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ತನಿಖೆಗೆ ಸಹಕರಿಸಬೇಕಿತ್ತು. ತನಿಖೆಗೆ ಕರೆದಾಗ ಅವರು ಸಹಕರಿಸದಿದ್ದರೆ ಅದಕ್ಕೆ ಸೇಡು ಅಂದರೆ ಹೇಗಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ನಾವು ಅಂದುಕೊಂಡಿಲ್ಲ. ಅಧಿಕಾರದಲ್ಲಿದ್ದವರು ಸೇಡಿನ ರಾಜಕಾರಣ ಮಾಡಿದ್ದಾರೆ ಅಂದರೆ ಏನರ್ಥ. ಯಾವ ಸರ್ಕಾರ ಬಂದರೂ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಶಿವಕುಮಾರ್ ಮೇಲೆ ನಮ್ಮ ಸೇಡಿಲ್ಲ. ನಾವು ಒಳ್ಳೆಯ ಫ್ರೆಂಡ್ಸ್. ಅಂತದ್ದೇನು ಅವರು ನಮಗೆ ಮಾಡಿಲ್ಲ ಎಂದಿದ್ದಾರೆ.
Advertisement
Advertisement
ತಪ್ಪು ಮಾಡಿದ್ದೀರಿ ಎಂದು ಡಿಕೆಶಿಯನ್ನು ಬಂಧಿಸಿಲ್ಲ. ತನಿಖೆಗೆ ಸಹಕರಿಸಿಲ್ಲವೆಂದು ಬಂಧಿಸಿದ್ದಾರೆ. ಶಿವಕುಮಾರ್ ತನಿಖೆಗೆ ಸಹಕರಿಸಬೇಕಿತ್ತು. ತನಿಖೆಗೆ ಕರೆದಾಗ ಸಹಕರಿಸಿಲ್ಲ, ಅದಕ್ಕೆ ಸೇಡು ಅಂದರೆ ಹೇಗಾಗುತ್ತದೆ. ಶಿವಕುಮಾರ್ ತಪ್ಪಿತಸ್ಥರು ಎಂದು ಬಂಧನ ಮಾಡಿಲ್ಲ. ಕಾನೂನು ಸುವ್ಯವಸ್ಥೆ ಕುರಿತು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಪೊಲೀಸ್ ಫೋರ್ಸ್ ಇದೆ. ಕಾನೂನು ಕಾಪಾಡುವುದನ್ನ ಮಾಡುತ್ತಿದ್ದಾರೆ. ಯಾರೋ ಕಲ್ಲು ಹೊಡೆಯುತ್ತಾರೆ ಎಂದು ಅಳುತ್ತಾ ಕೂರೋದಕ್ಕೆ ಆಗುತ್ತದೆಯಾ ಎಂದು ಪ್ರಶ್ನಿಸಿದ್ದಾರೆ.
Advertisement
ಉಪ್ಪು ತಿಂದವರು ನೀರು ಕುಡಿಯಲೇಬೇಕು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೋವಿಂದ ಕಾರಜೋಳ ಆಕಸ್ಮಿಕವಾಗಿ ಹೇಳಿಕೆ ನೀಡಿದ್ದಾರೆ. ಕಾನೂನು ಕ್ರಮ ಜರಗಿಸುತ್ತಾರೆ ಎಂದು ಹೇಳಿದ್ದನ್ನು ಇಷ್ಟೊಂದು ದೊಡ್ಡ ಸುದ್ದಿ ಮಾಡಬಾರದಿತ್ತು. ಶಿವಕುಮಾರ್ ತಪ್ಪಿತಸ್ಥ ಹೌದೋ, ಅಲ್ಲವೋ ಎಂದು ನಾವು ಹೇಗೆ ಹೇಳುವುದು. ಇನ್ನೂ ತನಿಖೆ ನಡೆಯುತ್ತಿದೆ ಎಂದರು.
Advertisement
ಕಾನೂನು ಮಂತ್ರಿಯಾಗಿ ನಾನು ಹೇಳುತ್ತಿದ್ದೇನೆ. ತಪ್ಪಿತಸ್ಥ ಎಂದು ಶಿವಕುಮಾರ್ ಗಿಲ್ಟಿಪೀಲ್ ಮಾಡಿಕೊಳ್ಳಬೇಡಿ. ಮಂಗಳವಾರ ಇಡಿ ಮುಂದೆ ಅಷ್ಟೊಂದು ಜನ ಸೇರಿಕೊಂಡು ಗಲಾಟೆ ಮಾಡಬಾರದಿತ್ತು. ನಾಲ್ಕು ದಿನ ತನಿಖೆ ಸಹಕರಿಸಿದವರು ಇನ್ನೆರಡು ದಿನ ಸಹಕರಿಸಬೇಕಿತ್ತು. ನಾವಂತೂ ಇದನ್ನ ರಾಜಕೀಯ ಮೈಲೆಜ್ ತೆಗೆದುಕೊಳ್ಳುತ್ತಿಲ್ಲ. ಅವರು ತೆಗೆದುಕೊಂಡರೆ ನಾವೇನೂ ಮಾಡುವುದಿಲ್ಲ ಎಂದು ತಿಳಿಸಿದರು.
ಅನರ್ಹ ಶಾಸಕರಿಗೆ ಯಾವುದೇ ರೀತಿ ಅನ್ಯಾಯ ಆಗುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಬೇಗ ಮಾಡಿ ಎಂದು ಫೋರ್ಸ್ ಮಾಡುವುದಕ್ಕೆ ಆಗಲ್ಲ. ಸ್ವಲ್ಪ ದಿನದಲ್ಲಿ ಇತ್ಯರ್ಥ ಆಗುತ್ತದೆ. ಅವರಿಗೆ ಅನರ್ಹತೆ ಆಗುವುದಿಲ್ಲ. ಅನರ್ಹತೆ ಆದರೂ ಚುನಾವಣೆ ನಿಲ್ಲಬಾರದು ಎಂದು ಯಾವ ಕಾನೂನಿನಲ್ಲಿ ಬರೆದಿಲ್ಲ. ಅನರ್ಹ ಆದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ನಮ್ಮ ಅಂದಾಜಿನಲ್ಲಿ ಮುಂದೆ ಅನರ್ಹರು ಸಚಿವರು ಆಗಬಹುದು ಎಂದರು.