ದಾವಣಗೆರೆ: ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮುಂದೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿಯ ಕಾಗಿನೆಲೆ ಕನಕ ಗುರು ಪೀಠದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಸಭೆ ನಡೆಸಲಾಯಿತು. ಸಭೆ ನಡೆಯುತ್ತಿರುವ ವೇಳೆಯೂ ಸಚಿವರು ಕಣ್ಣೀರು ಹಾಕಿದ್ದು, ನಂತರ ನಡೆದ ಸುದ್ದಿಗೋಷ್ಠಿ ಸಂದರ್ಭದಲ್ಲಿಯೂ ಕಣ್ಣೀರು ಹಾಕಿದ್ದಾರೆ.
Advertisement
Advertisement
ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ನಮಗೂ ಸಾಕಷ್ಟು ಕೋಪಗಳಿದ್ದವು. ಆದರೆ ಸಚಿವರ ಕಣ್ಣಂಚಿನಲ್ಲಿ ಕಣ್ಣೀರು ಇರುವುದನ್ನು ನೋಡಿದೆ. ಮಾತುಕಥೆ ನಡೆಸುತ್ತಿರುವ ವೇಳೆ ಸಚಿವರು ಪೊಲೀಸರಿಗೂ ನಾಮಫಲಕ ಹಾಕಲು ಯಾವುದೇ ರೀತಿ ಅಡ್ಡಿ ಮಾಡಬೇಡಿ ಎಂದು ಸೂಚಿಸಿದರು ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ನಾನು ಯಾವತ್ತೂ ವೃತ್ತಕ್ಕೆ ಹೆಸರು ಇಡುವುದನ್ನು ವಿರೋಧ ಮಾಡಿಲ್ಲ. ಸ್ವಾಮಿಗಳಿಗೆ ಒಂದು ಕೆಟ್ಟ ಪದವನ್ನೂ ಬಳಸಿಲ್ಲ. ಸಭೆಯಲ್ಲಿ ಗೊಂದಲವಾದಾಗ ಏರು ಧ್ವನಿಯಲ್ಲಿ ಮಾತನಾಡಿ, ನನಗೂ ಮಾತನಾಡಲು ಬಿಡಿ ಎಂದು ಹೇಳಿದೆ ಅಷ್ಟೇ. ಯಾವುದೇ ಸಮುದಾಯಕ್ಕೆ ನಾನು ನೋವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಸಂಪರ್ಕದ ಕೊರತೆಯಿಂದ ಈ ರೀತಿಯಾಗಿದೆ. ರಾಜ್ಯದಲ್ಲಿ ಈ ರೀತಿ ನಡೆಯಬಾರದಿತ್ತು. ನಾನು ಬರುವಾಗ ಕನಕ ವೃತ್ತದ ಹೆಸರಿನ ಬೋರ್ಡ್ ಹಾಕಲು ಅಡಚಣೆ ಮಾಡಬೇಡಿ ಎಂದು ಎಸ್‍ಪಿಗೆ ಹೇಳಿ ಬಂದಿದ್ದೇನೆ. ಆ ವೃತ್ತಕ್ಕೆ ಕನಕ ದಾಸರ ಹೆಸರು ಇಟ್ಟಿದ್ದು ನನಗೆ ಗೊತ್ತಿರಲಿಲ್ಲ. ಅದಕ್ಕೆ ಶ್ರೀಗಳನ್ನು ಕೇಳಿದೆಯಷ್ಟೆ, ಅದೇ ಈ ಗೊಂದಲಕ್ಕೆ ಕಾರಣವಾಗಿದೆ ಎಂದರು.
ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹೊಸದುರ್ಗದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಜರಿದ್ದರು. ಕೇವಲ ನಾಲ್ವರ ನಡುವೆ ಇಂದು ಸಭೆ ನಡೆದಿದೆ.
ಏನಿದು ಗೊಂದಲ?
ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಇದರಲ್ಲಿ ಕುರುಬ ಸಮುದಾಯದ ಮುಖಂಡರು ಸಹ ಭಾಗವಹಿಸಿದ್ದರು.
15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತದೆ. ಈಗ ಆ ಸ್ಥಳಕ್ಕೆ ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯದವರು ಮುಂದಾಗಿದ್ದಾರೆ. ಇದಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ಸ್ವಾಮೀಜಿ ತಿಳಿಸಿದ್ದರು. ವೃತ್ತಕ್ಕೆ ಕನಕದಾಸರ ಹೆಸರಿಡಲೇಬೇಕು, ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮಾಧುಸ್ವಾಮಿಯವರು, ನೀವು ಧಮ್ಕಿ ಹಾಕುತ್ತೀರ, ನಾನೂ ಹೋರಾಟಗಾರನೇ ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವುದೇ ನನ್ನ ಹೋರಾಟ ಎಂದು ಸಿಡಿಮಿಡಿಗೊಂಡಿದ್ದರು. ಹೀಗಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.