ಬೆಂಗಳೂರು: ಹುಳಿಯಾರು ಕನಕ ವೃತ್ತ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷಮೆ ಕೇಳಿದರೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ವಿವಾದದ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸ್ವಾಮೀಜಿಗೆ ಏಕ ವಚನ ಬಳಸಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಸ್ವಾಮೀಜಿಗೆ ಅಪಚಾರ ಮಾಡುವುದು, ಏಕ ವಚನ ಬಳಸುವುದು ನನ್ನ ಬದುಕಿನಲ್ಲಿ ಬಂದಿಲ್ಲ. ನಾವು ಸಿದ್ದಗಂಗಾ ಶ್ರೀಗಳ ಸಂಸ್ಕಾರದಲ್ಲಿ ಬೆಳೆದಿರುವವರು, ಖಾವಿ ಹಾಕಿದವರೆಲ್ಲರಿಗೂ ಸಿದ್ದಗಂಗಾ ಶ್ರೀಗಳಿಗೆ ನೀಡಿದಷ್ಟೇ ಗೌರವವನ್ನು ಕೊಡುತ್ತೇವೆ. ದುರಂತವೆಂದರೆ ಸ್ವಾಮೀಜಿಗಳು ವಿವಾದಕ್ಕೆ ಬರುವುದು, ಚರ್ಚೆಗೆ ಭಾಗವಹಿಸುವುದು, ಸಿಟ್ಟಾಗುವುದು. ಅಲ್ಲದೆ ಮಾತಿಗೆ ಮಾತು ಬೆಳೆಯುವ ಸ್ಥಿತಿಯನ್ನು ಅವರೂ ನಿರ್ಮಾಣ ಮಾಡಿಕೊಳ್ಳಬಾರದು ಎಂದರು.
Advertisement
ನಂತರ ನಮ್ಮ ನಾಯಕ ಯಡಿಯೂರಪ್ಪನವರು ಕ್ಷಮೆ ಕೇಳುವ ವಾತಾವರಣ ನಿರ್ಮಾಣವಾಗಿದ್ದರೆ, ನಾನೂ ಕೂಡ ಅವರೊಂದಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
Advertisement
Advertisement
ನಾನು ಏಕವಚನದಲ್ಲಿ ಮಾತನಾಡಿಲ್ಲ, ಇದೆಲ್ಲ ಸುಳ್ಳು. ನಾನು ಅವರಿಗಾಗಿ 2 ಗಂಟೆ ಕಾದಿದ್ದೇನೆ. ಅವರು ಬಂದಾಗ ಎದ್ದು ನಿಂತು ಸ್ವಾಗತಿಸಿದ್ದೇನೆ. ಅಲ್ಲದೆ ಅವರ ಸಂಪೂರ್ಣ ಮಾತುಗಳನ್ನು ಕೇಳಿದ್ದೇನೆ. ಅವರು ನನಗೆ ಮಾತನಾಡಲಿಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದರು.
Advertisement
ಅಲ್ಲಿನ ಪರಿಸ್ಥಿತಿ ನನಗೆ ತಿಳಿದಿಲ್ಲ ಎಂದು ಹೇಳಿದಾಗ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ನನ್ನೊಂದಿಗೆ ವಾದ ಮಾಡಿದ್ದಾರೆ. ನನಗೆ ಇರುವ ಮಾಹಿತಿಯನ್ನಾದರೂ ಹೇಳಲು ಬಿಡಿ ಎಂದೆ, ಆದರೂ ಅವರು ಅವರದ್ದೇ ಮಾತನ್ನು ಹೇಳಿದರು. ಅವರು ರೇಗಿದಾಗಲೂ ನಾನು ಏಕವಚನ ಬಳಸಿಲ್ಲ. ನಂತರ ಅವರು ನಾನು ಹೋರಾಟ ಮಾಡುತ್ತೇನೆ ಎಂದರು ನಾನು ಮಾಡಿ, ನಾನು ಹೋರಾಟ ಮಾಡಿಕೊಂಡೆ ಬಂದವನು ಎಂದು ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕನಕ ವೃತ್ತ ಎಂದು ಹೆಸರಿಡುವುದರಲ್ಲಿ ನನ್ನ ಯಾವುದೇ ತಕರಾರಿಲ್ಲ. 2006 ರಲ್ಲಿ ಪಂಚಾಯಿತಿಯಲ್ಲಿ ಆಗಿದ್ದ ಪ್ರಸ್ತಾವನೆ ನನಗೆ ತಿಳಿದಿರಲಿಲ್ಲ. ಇದೀಗ ಪಟ್ಟಣ ಪಂಚಾಯಿತಿ ಆದ ನಂತರ ಪ್ರಸ್ತಾವನೆ ಸಲ್ಲಿಸಲು ಹೇಳಿದ್ದೇನೆ. ಇದಾದ ನಂತರ ಅವರು ವೃತ್ತಕ್ಕೆ ಕನಕದಾಸರ ಹೆಸರನ್ನು ಇಟ್ಟುಕೊಳ್ಳಬಹುದು ನನ್ನದೇನೂ ತಕರಾರಿಲ್ಲ ಎಂದರು.
ಈ ಕುರಿತು ರಾಜ್ಯಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕುರುಬ ಸಮುದಾಯದಲ್ಲೇ ಎರಡು ಬಣಗಳಾಗಿವೆ. ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಪರ ಕುರುಬ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಶಾಂತಿ ಸಭೆಯಲ್ಲಿ ನಡೆದ ಸತ್ಯವನ್ನು ಮುಖಂಡರು ಬಿಚ್ಚಿಟ್ಟಿದ್ದಾರೆ. ಸಚಿವ ಮಾಧುಸ್ವಾಮಿ ವಿರುದ್ಧ ಪಿತೂರಿ ನಡೆಸಿ ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಕುರುಬ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಮಾಧುಸ್ವಾಮಿಯವರ ಏಳಿಗೆ ಸಹಿಸಲಾಗದೆ ಪಿತೂರಿ ಮಾಡಲಾಗಿದೆ. ಮಾಧುಸ್ವಾಮಿಗೆ ಜಾತಿ ವಿರೋಧಿ ಪಟ್ಟಕಟ್ಟಲು ಯತ್ನಿಸಲಾಗಿದೆ. ಅವರ ವಿರುದ್ಧ ಕುರುಬ ಸಮಾಜ ಎತ್ತಿಕಟ್ಟುವ ಪ್ರಯತ್ನ ನಡೆಸಲಾಗಿದೆ. ಮೂರು ವರ್ಷಗಳ ಹಿಂದೆ ಕುರುಬ ಸಮುದಾಯದ ಮೇಲೆ ದೌರ್ಜನ್ಯ ನಡೆದಿತ್ತು. ಅಂದು ಯಾಕೆ ಸ್ವಾಮೀಜಿ ಬರಲಿಲ್ಲ, ರಾಜ್ಯಸಂಘ ಯಾಕೆ ಬರಲಿಲ್ಲ. ಈಗ 21 ಸೆಕೆಂಡ್ ವಿಡಿಯೋ ಕಟ್ ಮಾಡಿ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುರುಬ ಸಮಾಜದ ಬಗ್ಗೆ ಮಾಧುಸ್ವಾಮಿಯವರಿಗೆ ಗೌರವವಿದೆ. ಕುರುಬ ಸಮಾಜ ಕೆಲವರಿಗೆ ಮಾತ್ರ ಸೀಮಿತವಾಗಿದೆ. ಶಿವಕುಮಾರ ಸ್ವಾಮೀಜಿ ಸರ್ಕಲ್ ಅಂತ ಹೆಸರಿಡಲು ನಾನು ಬಿಡುವುದಿಲ್ಲ, ಕನಕವೃತ್ತ ಅಂತ ಹೆಸರಿಡಲು ಅಭ್ಯಂತರವಿಲ್ಲ ಎಂದು ಸಭೆಯಲ್ಲಿ ಮಾಧುಸ್ವಾಮಿ ಹೇಳಿದ್ದರು. ಸಚಿವರು ಕಾನೂನಾತ್ಮಕವಾಗಿ ಹೆಸರಿಡಲು ಸೂಚನೆ ನೀಡಿದ್ದರು. ಆದರೆ ಸ್ವಾಮೀಜಿ ಈಗಲೇ ನಾಮಫಲಕ ಹಾಕಲು ಪಟ್ಟು ಹಿಡಿದು, ಹೆಸರು ಬದಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು. ಆಗ ಮಾಧುಸ್ವಾಮಿ ಸ್ವಾಮೀಜಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಸ್ಥಾನದಿಂದ ವಜಾಗೆ ಆಗ್ರಹ
ಈ ಬೆಳವಣಿಗೆ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ ರಾಜ್ಯಾದ್ಯಂತ 17 ಕಡೆ ಪ್ರತಿಭಟನೆ ನಡೆಸಲಾಗಿದೆ. ದಾವಣಗೆರೆಯಲ್ಲಿ ಸಹ ಕುರುಬ ಸಮಾಜದಿಂದ ಪ್ರತಿಭಟನೆ ನಡೆಸಲಾಗಿದ್ದು, ನಗರದ ಎಸಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ಕುರುಬ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಹಾಲುಮತ ಸಮಾಜದಿಂದ ಒತ್ತಾಯ ಮಾಡಲಾಯಿತು.
ಸಭೆಯಲ್ಲಿ ಆಗಿದ್ದೇನು?
ಹುಳಿಯಾರು ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಅಪೂರ್ಣಗೊಂಡಿತ್ತು. ಇದರಲ್ಲಿ ಕುರುಬ ಸಮುದಾಯದ ಮುಖಂಡರು ಸಹ ಭಾಗವಹಿಸಿದ್ದರು.
15 ವರ್ಷಗಳಿಂದ ಆ ವೃತ್ತವನ್ನು ಕನಕವೃತ್ತ ಎಂದು ಕರೆಯಲಾಗುತ್ತದೆ. ಈಗ ಆ ಸ್ಥಳಕ್ಕೆ ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯದವರು ಮುಂದಾಗಿದ್ದಾರೆ. ಇದಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡಲು ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದು ಸಭೆಯಲ್ಲಿ ಸ್ವಾಮೀಜಿ ತಿಳಿಸಿದ್ದರು. ವೃತ್ತಕ್ಕೆ ಕನಕದಾಸರ ಹೆಸರಿಡಲೇಬೇಕು, ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮಾಧುಸ್ವಾಮಿಯವರು, ನೀವು ಧಮ್ಕಿ ಹಾಕುತ್ತೀರ, ನಾನೂ ಹೋರಾಟಗಾರನೇ ಕಾನೂನು ಬಿಟ್ಟು ಹೋಗುವುದಿಲ್ಲ. ಕಾನೂನಿಗೆ ಆದ್ಯತೆ ನೀಡುವುದೇ ನನ್ನ ಹೋರಾಟ ಎಂದು ಸಿಡಿಮಿಡಿಗೊಂಡಿದ್ದರು. ಹೀಗಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಸಭೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.