-ಜನವರಿ 14, 15ರಂದು ಸಚಿವ ಸಂಪುಟ ವಿಸ್ತರಣೆ
ಕಾರವಾರ: ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕಾನೂನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಣ್ಣ ನೀರಾವರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಅಧಿಕಾರಿಗಳು ಸಚಿವರು ಕೇಳಿದ ಮಾಹಿತಿ ನೀಡಲು ಪರದಾಡಿದರು. ಯಾವ ಕಾಮಗಾರಿ ಬಗ್ಗೆ ಕೇಳಿದರೂ ಸ್ಪಷ್ಟ ಮಾಹಿತಿ ನೀಡಲಿಲ್ಲ. ಅಷ್ಟೇ ಅಲ್ಲದೇ, ಟೆಂಡರ್ ಪ್ರಕಟಣೆ ಬಗ್ಗೆಯೂ ವಿವರವನ್ನು ಅಧಿಕಾರಿಗಳು ಸರಿಯಾಗಿ ನೀಡಿರಲಿಲ್ಲ. ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಸಚಿವರು ತರಾಟೆಗೆ ತೆಗೆದುಕೊಂಡರು.
Advertisement
Advertisement
ಕಾಮಗಾರಿಗೆ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲಾಖೆಯ ವರದಿ ಪತ್ರದಲ್ಲಿ ಇರುವ ಮಾಹಿತಿ ಬೇರೆ, ನೀವು ನೀಡುತ್ತಿರುವ ಮಾಹಿತಿಯೇ ಬೇರೆ ಇದೆ. ದಾಖಲೆಗಳನ್ನು ಬರೆಯುವಾಗ ಕುಡಿದು ಸಿದ್ದಪಡಿಸಿದ್ಧೀರಾ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದರು.
Advertisement
ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದೇನೆ. ನೀವು ಮನೆಗೆ ಹೋಗುವ ಆಸೆಯಿದೆಯೇ? ಸರ್ಕಾರದಿಂದ ಸಂಬಳ ತೆಗೆದುಕೊಳ್ಳುತ್ತೀರಾ, ಕೆಲಸ ಮಾಡದೇ ಇರಲು ನಾಚಿಕೆಯಾಗುವುದಿಲ್ಲವೇ? ಎಂದು ಕಿಡಿಕಾರಿದರು. ಸೂಕ್ತ ಮಾಹಿತಿ ನೀಡದ ಮತ್ತು ಸಮರ್ಪಕ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುಂಡಗೋಡ ಎಂಜಿನಿಯರ್ ಮುರುಳೀಧರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದರು.
Advertisement
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಅವರು, ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವುದು ಸಿಎಂ ಅವರಿಗೆ ಬಿಟ್ಟ ವಿಚಾರ. ಆದ್ದರಿಂದ ಮಂತ್ರಿ ಮಂಡಲದ ಸದಸ್ಯರು ಈ ಬಗ್ಗೆ ಮಾತನಾಡಬಾರದು. ಸಿಎಂ ಅವರ ನಿರ್ಧಾರವೇ ಅಂತಿಮ ಎಂದರು.
ಡಿಸಿಎಂ ಆಗುವ ಆಸೆ: ಸಚಿವ ಶ್ರೀರಾಮಲು ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕೊಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನಗೂ ಉಪಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಲಿಂಗಾಯತರಿಗೆ ಉಪಮುಖ್ಯಮಂತ್ರಿ ಕೊಡಬೇಕು ಎಂದು ನಾವು ಕೇಳಬಹುದು. ಲಕ್ಷ್ಮಣ ಸವದಿ ಅವರಿಗೆ ಈಗಾಗಲೇ ಡಿಸಿಎಂ ಹುದ್ದೆ ಕೊಡಲಾಗಿದೆ. ಆದರೂ ಜನಸಂಖ್ಯೆಗೆ ಅನುಗುಣವಾಗಿ ನಾವು ಕೇಳಬಹುದು. ಆದರೆ ಅದೆಲ್ಲಾ ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಜನವರಿ 14 ಮತ್ತು 15ರಂದು ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದರು.