-ದುಡಿಯುವ ಕೈಗಳಿಗೆ ಕೆಲಸ ನೀಡಿದ ಎನ್‌ಆರ್‌ಇಜಿ
ಶಿವಮೊಗ್ಗ: ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆನ್ನುವ ಗುರಿ ಒಂದು ಕಡೆಯಾದರೆ, ಲಾಕ್‍ಡೌನ್ ಕಾರಣದಿಂದ ಮತ್ತೊಂದು ಕಡೆ ಕೆಲಸವಿಲ್ಲದೇ ಜನರು ಕಂಗಾಲಾಗಿರುವುದು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಯೋಜನೆಗಳಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ. ಈಗಾಗಲೇ ಎನ್.ಆರ್.ಇ.ಜಿ. ಯೋಜನೆ ಅಡಿಯಲ್ಲಿ ಸಾವಿರಾರು ಜನರಿಗೆ ಕೆಲಸ ನೀಡಿರುವ ಇಲಾಖೆ ಇದೀಗ ಅಂತರ್ಜಲ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ.
Advertisement
Advertisement
ರಾಜ್ಯ ಸರ್ಕಾರ ಕೊರೊನಾ ಮಹಾಮಾರಿ ಅಟ್ಟಹಾಸದ ನಡುವೆಯೂ ಯೋಜನೆಗಳನ್ನು ಜಾರಿಗೊಳಿಸಿಸುವ ಮೂಲಕ ಶ್ಲಾಘನೆಗೆ ಕಾರಣವಾಗಿದೆ. ಇದೀಗ ಎನ್.ಆರ್.ಇ.ಜಿ. ಯೋಜನೆಯಡಿಯಲ್ಲಿಯೇ, ಮಹತ್ವಾಕಾಂಕ್ಷೆಯ ಯೋಜನೆಗೂ ಚಾಲನೆ ನೀಡಲಾಗಿದೆ. ಸುಮಾರು 252 ಕೋಟಿ ರೂ. ವೆಚ್ಚದಲ್ಲಿ, ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ಮಂದಹಾಸ ಮೂಡುವಂತೆ ಮಾಡಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಅಂತರ್ಜಲ ಚೇತನ ಯೋಜನೆಗೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
Advertisement
ಪ್ರಥಮ ಹಂತದಲ್ಲಿ ಒಟ್ಟು 9 ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಟಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಸುಮಾರು 23 ಸಾವಿರ ಕೆರೆಗಳಿದ್ದು, ಅವುಗಳ ಪೈಕಿ 5,300 ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ. ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದು ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಯಿತು.
Advertisement
ಮುಂದಿನ ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ಜಿಲ್ಲೆಯ 1,650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿಯಲ್ಲಿ 16,255 ಬೋಲ್ಡರ್ ಚೆಕ್ ನಿರ್ಮಾಣ, 15948 ಇಂಗುಬಾವಿ, 307 ಇಂಗು ಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳು ನಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಯೋಜನೆಯಿಂದ ಸುಮಾರು 8.82 ಲಕ್ಷ ಜನರಿಗೆ ಸದುಪಯೋಗವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಸಂಕಷ್ಟದ ಸಮಯದಲ್ಲಿ ಯೋಜನೆಗೆ ಜಾರಿಗೆ ತಂದಿರುವುದರಿಂದ ಈಶ್ವರಪ್ಪರಿಗೆ ಇದೀಗ ಆಧುನಿಕ ಕಾಲದ ಭಗೀರಥ ಎಂದು ಹಾಡಿ ಹೊಗಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದಕ್ಕೆ ಶಿವಮೊಗ್ಗದಲ್ಲಿ ಹಸಿರು ನಿಶಾನೆ ತೋರಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಕೊರೊನಾ ಭಯವಿಲ್ಲದೇ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳಿದ್ದರೂ ಕೂಡ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಮಾಜಿಕ ಅಂತರ ಕಾಣದೇ ಇರುವುದು ವಿಪರ್ಯಾಸವಾಗಿತ್ತು.