ಶಿವಮೊಗ್ಗ: ದೇಶವೇ ಲಾಕ್‍ಡೌನ್‍ನಿಂದಾಗಿ ನಲುಗಿ ಹೋಗುತ್ತಿದ್ದು, ಅದೆಷ್ಟೋ ದುಡಿಯುವ ಮಂದಿ ಕೈಕಟ್ಟಿ ಮನೆಯಲ್ಲೇ ಕುಳಿತುಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತ್ರ ಎನ್.ಆರ್.ಇ.ಜಿ. ಯೋಜನೆ ಅಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದಾರೆ.
ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ, ದೂರ ದೂರ ನಿಂತು ಕೆಲಸ ಮಾಡುವಂತೆ ಸೂಚನೆ ಕೂಡ ನೀಡಿದ್ದು, ಜಿಲ್ಲೆಯ 9 ಕೆರೆಗಳಲ್ಲಿನ ಹೂಳು ತೆಗೆಯುವ ಯೋಜನೆಗೆ ಚಾಲನೆ ನೀಡಿದ್ದಾರೆ.
Advertisement
Advertisement
ಇಂದು ಶಿವಮೊಗ್ಗ ಗ್ರಾಮಾಂತರ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಅಗಸನ ಕಟ್ಟೆ ಕೆರೆ ಅಭಿವೃದ್ಧಿಗೆ ಉದ್ಯೋಗ ಚೀಟಿ ವಿತರಣೆ ಮಾಡಿದರು. ಮಾನವ ದಿನಗಳ ಪ್ರಕಾರ ಉದ್ಯೋಗ ಮಾಡಿದವರಿಗೆ ಸೂಕ್ತ ಸಮಯದೊಳಗೆ ಹಣ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ದುಡಿಯುವ ಕಾರ್ಮಿಕರಿಗೆ ಕೋವಿಡ್-19 ವೈರಸ್ ಸೋಂಕು ಹಿನ್ನೆಲೆಯಲ್ಲಿ ಪ್ರಮಾಣ ವಚನ ಕೂಡ ಬೋಧಿಸಿದರು.
Advertisement
ಕೆಲಸ ಮಾಡುವ ವೇಳೆಯಲ್ಲಿ ಕೆಮ್ಮು, ಜ್ವರ, ಶೀತ ಸಮಸ್ಯೆ ಏನಾದರೂ ಕಂಡು ಬಂದರೆ ನಮ್ಮ ಅಧಿಕಾರಿಗಳಿಗೆ ತಕ್ಷಣ ತಿಳಿಸಿ ಎಂದು ಮನವಿ ಮಾಡಿದರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿ.ಇ.ಓ ವೈಶಾಲಿ, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಸೇರಿದಂತೆ, ಇತರರು ಉಪಸ್ಥಿತರಿದ್ದರು.