ಕೋಲಾರ: ಮೈತ್ರಿ ಸರ್ಕಾರದ ಕುರಿತು ಅಸಭ್ಯವಾಗಿ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ ತಾಲೂಕಿನ ಹನುಮನಹಳ್ಳಿ, ಹುತ್ತೂರು ಸೇರಿದಂತೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಪ್ರತಿಪಕ್ಷ ಬಿಜೆಪಿಗೆ ಅಧಿಕಾರದ ಮದ ತಲೆಗೇರಿದೆ. ಸಾರ್ವಜನಿಕ ಜೀವನಕ್ಕೆ ಲಾಯಕಿಲ್ಲ ಎನ್ನುವ ರೀತಿ ನಡೆದುಕೊಂಡು ಬರುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುತ್ತಿದ್ದೇವೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಜನ ಇದನ್ನು ಮನ್ನಿಸುವುದಿಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದು.
Advertisement
Advertisement
ಕೈ ಮುರಿಯುತ್ತೇವೆ, ಕಾಲು ಮುರಿಯುತ್ತೇವೆ, ನಾಲಿಗೆ ಸೀಳುತ್ತೇವೆ ಎಂದು ಈ ಹಿಂದೆಯೂ ಬಿಜೆಪಿ ಮುಖಂಡರು ಹೇಳಿದ್ದರು. ಈ ರೀತಿಯ ಹೇಳಿಕೆ ಇದೇ ಮೊದಲೇನಲ್ಲ. ಬಿಜೆಪಿಯ ನಿಜವಾದ ಸಂಸ್ಕೃತಿ ಅದರಿಂದಲೇ ಗೊತ್ತಾಗುತ್ತೆ. ಕುಮಾರಿ ಶೋಭಾ ಕರಂದ್ಲಾಜೆ ಅವರು ಕೂಡ ಅದೇ ರೀತಿ ಎನ್ನುವುದು ಅವರ ಮಾತಿನಿಂದ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಗೌರವದಿಂದ ಕಾಣಬೇಕಾಗಿರುವುದು ನಮ್ಮ ಧರ್ಮ. ಸಂಸದೆ ಶೋಭಾ ಕರಂದ್ಲಾಜೆ ಅವರು ಒಂದು ಸಮುದಾಯಕ್ಕೆ ಅವಮಾನ ಆಗುವ ರೀತಿ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಮೇಲು ಕೀಳು ಎನ್ನುವ ಭಾವನೆಯಿಂದ ಬಿಜೆಪಿಯವರು ಹೊರ ಬಂದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಸೌಜನ್ಯ ಅವರಿಗೆ ಇಲ್ಲದಿರುವುದು ದುರದೃಷ್ಟ ಸಂಗತಿ. ಇದನ್ನು ಬಿಜೆಪಿಯವರು ತಿಳಿದುಕೊಳ್ಳುತ್ತಾರೆ ಎನ್ನುವ ನಂಬಿಕೆಯೂ ನನಗಿಲ್ಲ. ಮುಂದೆ ಜನರೇ ಅವರ ಮದ ಇಳಿಸುತ್ತಾರೆ. ಬಿಜೆಪಿಯವರು ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಪರಿತಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
ಸರಣಿ ಸಭೆಗಳನ್ನು ನಡೆಸಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಕುರಿತು ವರಿಷ್ಠರಲ್ಲಿ ಯಾವುದೇ ಭಿನ್ನಮತವಿಲ್ಲ. ಇದು ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಿರಬಹುದು. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗುತ್ತದೆ. ಸರ್ಕಾರ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.