– ನಾನು ಸಾಲಗಾರನಾಗಿದ್ದೇನೆ
– ನಂಬಿದವ್ರಿಂದಲೇ ಆಘಾತವಾಯ್ತು
ಬೆಂಗಳೂರು: ಎಂಟಿಬಿ ನಾಗರಾಜ್, ಮುನಿರತ್ನ, ಸೋಮಶೇಖರ್ ಇವರಿಗೆ ವಿರಸ ಬಂದಿರಬಹುದು ಆದರೆ ಇವರೆಲ್ಲ ನಮ್ಮ ಕುಟುಂಬದ ಸದಸ್ಯರು. ನಮ್ಮ ಕುಟುಂಬದಲ್ಲಿ ಈ ರೀತಿ ಆದಾಗ ಬರೀ ಅಧಿಕಾರ ಉಳಿಸಿಕೊಳ್ಳುವಂತಹ ಪರದಾಟ ಅಲ್ಲ ಇದು. ನಮಗೂ ನೋವಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು ತಾನು ಯಾಕೆ ಬೆಂಗಳೂರು ಉತ್ತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ? ಇದಕ್ಕೆ ಯಾರು ಕಾರಣ? ನನ್ನ ನೋವೇನು ಎಂಬುದನ್ನು ಎಳೆ ಎಳೆಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದೆ ಬಿಚ್ಚಿಟ್ಟರು.
Advertisement
Advertisement
ಕೃಷ್ಣಬೈರೇಗೌಡರು ಹೇಳಿದ್ದೇನು?
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಉತ್ತರಕ್ಕೆ ನಮ್ಮ ಮೈತ್ರಿ ಪಕ್ಷದಿಂದ ಯಾರು ಅಭ್ಯರ್ಥಿ ಆಗಬೇಕೆಂದು ಕೊನೆ ಗಳಿಗೆಯವರೆಗೆ ತೀರ್ಮಾನ ಆಗಿರಲಿಲ್ಲ. ನಾಮಪತ್ರ ಸಲ್ಲಿಸಲು ಕೊನೆಯ ದಿನದ ಹಿಂದಿನ ದಿನ ರಾತ್ರಿ ನಮ್ಮ ನಾಯಕರು ಸಿದ್ದರಾಮಯ್ಯ ಅವರ ಮನೆಯಲ್ಲಿ ಸೇರಿದೆವು. ಆ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 7 ಕಡೆ ದೋಸ್ತಿ ಪಕ್ಷದ ಶಾಸಕರಿದ್ದೇವೆ. ಈ 7ರ ಪೈಕಿ ಮೂವರು ಭೈರತಿ ಸುರೇಶ್, ಅಖಂಡ ಶ್ರೀನಿವಾಸ್ ಹಾಗೂ ದಾಸರಹಳ್ಳಿ ಮಂಜುನಾಥ್. ಆ ಸಂದರ್ಭದಲ್ಲಿ ನನ್ನ ಹೆಸರು ತೆಗೆದರೆ ಸರಿ ಹೋಗಲ್ಲ ಎಂದು ಸ್ನೇಹದಲ್ಲಿಯೇ ಅವರಿಗೆ ಎಚ್ಚರಿಕೆ ಕೊಟ್ಟಿದ್ದೆ. ಹೀಗಾಗಿ ಈ ಮೂವರು ನನ್ನ ಬಲವಂತದಿಂದಾಗಿ ಹೆಸರು ತೆಗೆದಿರಲಿಲ್ಲ.
Advertisement
Advertisement
ಚುನಾವಣೆಗೆ ನಿಲ್ಲಲು ಅಂದು ನಾನು ಮಾನಸಿಕವಾಗಿ ತಯಾರಿರಲಿಲ್ಲ. ಆದರೆ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಕೆ.ಆರ್. ಪುರಂನ ಭೈರತಿ ಬಸವರಾಜ್ ಈ ಮೂವರು, ನೀವು ಅಲ್ಲದೇ ಬೇರೆ ಅಭ್ಯರ್ಥಿಯಾಗಲು ಸಾಧ್ಯವೇ ಇಲ್ಲ. ಹೀಗಾಗಿ ನೀವೇ ನಿಲ್ಲಬೇಕು ಎಂದು ಹೇಳಿದ್ದರು. ಆಗ ನಾನು ಇದರಲ್ಲಿ ನನಗ್ಯಾವ ಆಸಕ್ತಿ ಇಲ್ಲ. ನಿಲ್ಲೋದಕ್ಕೆ ಮಾನಸಿಕವಾಗಿಯೂ ತಯಾರಿಲ್ಲ ಎಂದು ಹೇಳಿದ್ದೆ. ಆಗ ಆ ಶಾಸಕರು, ನಿಮಗೋಸ್ಕರ ಅಲ್ಲ ನಮಗೋಸ್ಕರ ನೀವು ಸ್ಪರ್ಧಿಸಬೇಕು ಎಂದು ಹೇಳಿದ್ದರು. ಹೀಗಾಗಿ ಕೊನೆಗೆ ನಾಯಕರು ಹಾಗೂ ಈ ಮೂವರು ಶಾಸಕರ ಮಾತಿಗೆ ಬೆಲೆ ಕೊಟ್ಟು ಅನಾವಶ್ಯಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಹೇಳಿದರು.
ಬೆಂಗಳೂರು ಉತ್ತರದಲ್ಲಿ ಇಪ್ಪತ್ತೆಂಟೂವರೆ ಲಕ್ಷ ಮತದಾರರಿದ್ದಾರೆ. 16 ದಿನದಲ್ಲಿ ನಾನು ಚುನಾವಣೆ ಮಾಡಬೇಕಾಗಿ ಬಂತು. ಚುನಾವಣೆಯಲ್ಲಿ ಸೋತಿದ್ದಷ್ಟೇ ಅಲ್ಲ ಯಡಿಯೂರಪ್ಪ ಸಾಹೇಬ್ರೆ. ಈ ಮಾತನ್ನು ಹೇಳಿದ್ರೆ ಕಾನೂನು ಉಲ್ಲಂಘನೆಯಾಗುತ್ತೋ ಗೊತ್ತಿಲ್ಲ. ಇಂದು ನಾನು ಸಾಲಗಾರನಾಗಿದ್ದೇನೆ. ಇವರೆಲ್ಲ ನಾವು ನಿಮ್ಮ ಸಹೋದರರು ಅಂತೆಲ್ಲ ಹೇಳಿ ನಂಬಿಸಿದರು. ಆದರೆ ಯಾರನ್ನು ನಾವು ನಂಬಿದ್ದೇವೋ, ಅವರು ಇಂದು ನಮ್ಮ ನಂಬಿಕೆಗೆ ಆಘಾತ ತರುವಂತಹ ಕೆಲಸ ಮಾಡಿದ್ದಾರೆ. ಇದನ್ನು ನಂಬಕ್ಕಾಗುತ್ತಿಲ್ಲ. ಇದರಿಂದ ನಮಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಗೆ ಸ್ಪರ್ಧಿಸಲು ನನ್ನ ತಾಯಿ, ಪತ್ನಿ ಹಾಗೂ ಒಡ ಹುಟ್ಟಿದವರಿಂದಲೂ ವಿರೋಧತ್ತು. ಆದರೂ ಅವರ ಮಾತನ್ನು ಉಲ್ಲಂಘಿಸಿ ರಾಜಕೀಯ ಪರಿವಾರದ ನನ್ನ ಸಹೋದರರ ಮಾತಿಗೆ ಬೆಲೆ ಕೊಟ್ಟು ಅವರ ಸಲುವಾಗಿ ಚುನಾವಣೆಗೆ ನಿಂತ ನೋವು ನಿಮಗೆ ಅರ್ಥವಾಗುವುದಿಲ್ಲ ಸರ್ ಎಂದು ಬೈರೇಗೌಡರು ಬಿಎಸ್ವೈ ಜೊತೆ ತಮ್ಮ ನೋವೇನು ಎಂಬುದನ್ನು ಹಂಚಿಕೊಂಡರು.
ಆದರೆ ಇಷ್ಟೆಲ್ಲ ಆದರೂ ನಾನು ಅವರನ್ನು ನಮ್ಮ ಸಹೋದರ ಅಲ್ಲ ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವರನ್ನು ತಾವು ಅಧಿಕಾರಕ್ಕೆ ಬರಲು ಉಪಯೋಗಮಾಡಿಕೊಂಡು, ಅವರಿಗೆ ಮಂತ್ರಿ ಪದವಿಯ ಆಸೆ ತೋರಿಸಿ, ಬೀದಿಯಲ್ಲಿ ಬಿಟ್ಟು ಹೈಕೋರ್ಟ್, ಸುಪ್ರೀಂ ಕೋರ್ಟ್ ಸುತ್ತುವಂತೆ ಮಾಡುವ ಮೂಲಕ ಅವರು ಸುಡುಗಾಡಿನಲ್ಲಿ ಅಲೆದಾಡುವಂತೆ ಮಾಡಿದ್ದೀರಿ ಅನ್ನೋ ನೋವು ಕೂಡ ನಮ್ಮಲ್ಲಿದೆ ಎಂದರು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಮಧ್ಯಪ್ರವೇಶಿಸಿ ಈ ಹಿಂದೆ ಶಾಸಕರು ಅನರ್ಹಗೊಂಡ ಪ್ರಕರಣ ಬೇರೆ, ನಮ್ಮ ಸದನದ ಸದಸ್ಯರ ಪ್ರಕರಣ ಬೇರೆ ಎಂದಾಗ ಗದ್ದಲ ಉಂಟಾಯಿತು.
2019ರ ಚುನಾವಣೆಯಲ್ಲಿ ಕೃಷ್ಣಬೈರೇಗೌಡರು 1,47,518 ಮತಗಳ ಅಂತರದಿಂದ ಸೋತಿದ್ದರು. ಡಿವಿ ಸದಾನಂದ ಗೌಡರು 8,24,500 ಮತಗಳನ್ನು ಪಡೆದರೆ ಕೃಷ್ಣಬೈರೇಗೌಡರು 6,76,982 ಮತಗಳನ್ನು ಪಡೆದಿದ್ದರು.