ಉಡುಪಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯ ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದ್ದಾರೆ. ಶೀಂಬ್ರಾ ಸಿದ್ಧಿ ವಿನಾಯಕ ದೇವಸ್ಥಾನದ ತಪ್ಪಲಲ್ಲಿರುವ ಸ್ನಾನ ಘಟ್ಟಕ್ಕೆ ಕೋಟ ದಂಪತಿ ಸಮೇತ ಆಗಮಿಸಿ ಸ್ವರ್ಣೆಗೆ ಬಾಗಿನ ಅರ್ಪಿಸಿದರು.
ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ತೀರ್ಥ, ಹಾಲು, ಬಾಗಿನವನ್ನು ಅರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಗಿನ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಶೀಂಬ್ರಾ ದೇವಸ್ಥಾನ, ಸ್ನಾನಘಟ್ಟವನ್ನು ಮುಜರಾಯಿ ಇಲಾಖೆಯಿಂದ ಅಭಿವೃದ್ಧಿ ಮಾಡಲಾಗುವುದು. ಡಾ. ವಿಎಸ್ ಆಚಾರ್ಯ ಕಾಲದಿಂದ ಈ ಕ್ಷೇತ್ರ ಪ್ರಸಿದ್ಧಿಯಲ್ಲಿದೆ ಎಂದರು.
Advertisement
Advertisement
ಮುಜರಾಯಿ ದೇವಸ್ಥಾನದ ಹಣ ದುರ್ಬಳಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯ ಹಣ ದುರ್ಬಳಕೆ ಆಗಲು ಬಿಡಲ್ಲ. ಇದು ಮುಜುರಾಯಿ ಇಲಾಖೆಯ ನಿರ್ಣಯ. ಈ ಬಗ್ಗೆ ಈಗಾಗಲೇ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. 27 ಸಾವಿರ ದೇವಸ್ಥಾನಗಳಿಗೆ ಇಲಾಖೆಯಿಂದ ತಸ್ತೀಕು (ಸಂಬಳ) ನೀಡಲಾಗುತ್ತಿದೆ. ವರ್ಷಕ್ಕೆ 48 ಸಾವಿರ ತಸ್ತೀಕು ಕೊಡುತ್ತೇವೆ. ತಸ್ತೀಕಿನಲ್ಲಿ ತಾರತಮ್ಯ ಇದೆ ಎಂಬ ಆರೋಪ ಇದೆ. ಈ ಗವರ್ನೆನ್ಸ್ ಮೂಲಕ ಖಾತೆಗೆ ಹಣ ಜಮಾ ಮಾಡಲು ಯೋಜನೆ ಹಾಕಿದ್ದೇವೆ ಎಂದರು. ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿದ್ದೇನೆ, ವಾರದೊಳಗೆ ಈ ಕುರಿತ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಕೋಟ ಹೇಳಿದರು.