– ಪ್ರಜ್ವಲ್, ರಮೇಶ್ ಜಾರಕಿಹೊಳಿ ರೀತಿ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದ ಸಚಿವ
ತುಮಕೂರು: ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಹನಿ ಟ್ರ್ಯಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ ಅಂತ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಸಚಿವ ರಾಜಣ್ಣ, ಅಧಿವೇಶನ ಮುಕ್ತಾಯ ಆದ ರೀತಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಸ್ಪೀಕರ್ ಪೋಡಿಯಂನ ಮೆಟ್ಟಿಲು ಯಾರೂ ಹತ್ತಲ್ಲ. ಅಂಥದ್ದರಲ್ಲಿ ಏರಿ ಅವರಿಗೆ ಧಮ್ಕಿ ಹಾಕಿರೋದು ಶೋಭೆಯಲ್ಲ. ಸಿದ್ಧರಾಮಯ್ಯರಿಗೆ, ಸ್ಪೀಕರ್‌ಗೆ ಅಗೌರವ ತರೋದು ಸರಿಯಲ್ಲ. ಬಿಜೆಪಿಗರೂ ಗೂಂಡಾ ವರ್ತನೆ ಮಾಡಿದ್ದಾರೆ. ಅವರ ಹೈ ಕಮಾಂಡ್ ಬುದ್ದಿ ಹೇಳಬೇಕು ಎಂದು ಕಿಡಿ ಕಾರಿದರು.
ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇವತ್ತು ಸಿಎಂ ಭೇಟಿ ಮಾಡೋದಿಲ್ಲ. ನಾಲ್ಕೈದು ದಿನದ ನಂತರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಗೃಹ ಸಚಿವರಿಗೆ ದೂರು ಕೊಡುತ್ತೇನೆ. ದೇವರು ನಿನಗೆ ಹೇಗೆ ಬುದ್ದಿ ಕೊಡುತ್ತೆ ಹಾಗೋ ಮಾಡು ಎಂದು ಸಿಎಂ ಹೇಳಿದ್ದಾರೆ. ಹನಿ ಟ್ರಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ. ಯಾರು ಯಾಕೆ ನನ್ನ ಟಾರ್ಗೆಟ್ ಮಾಡಿದ್ರು ಅಂತಾ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ, ಪ್ರಜ್ಬಲ್ ಹೇಗೆ ಟಾರ್ಗೆಟ್ ಮಾಡಿದ್ದಾರೋ ಹಾಗೆ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ ಎಂದರಲ್ಲದೇ ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಹಾಗಾಗಿ ನನಗೆ ಕೆಟ್ಟದಾಗಲ್ಲ. ಹಾಗಂತ ಸಾರ್ವಜನಿಕ ಜೀವನದಲ್ಲಿ ತೇಜೋವಾಧೆ ಮಾಡೋದು ಸರಿಯಲ್ಲ ಎಂದು ಹೇಳಿದರು.
ಹನಿಟ್ರ್ಯಾಪ್ ಯತ್ನ ಒಂದೂವರೆ ತಿಂಗಳಿಂದ ನಡೆದಿದೆ. ವಿಷ ಕನ್ಯೆಯರ ರೀತಿ ಇಲ್ಲೂ ಇದ್ದಾರೆ. ಆದ್ದರಿಂದ ಈ ವಿಚಾರ ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ಚಿಂತನೆ ಇದೆ. ಸಚಿವ ಸತೀಶ್ ಜಾರಕಿಹೊಳಿ ಇದನ್ನು ಗಂಭೀರವಾಗಿ ಪರಿಗಣಿಸೋಣ ಅಂದಿದ್ದಾರೆ. ಅವರು ಏನೋ ಹೇಳುತ್ತಾರೆ ನೋಡುನಾ..? ಎಂದು ಹೇಳಿದರು.
ವಿಷಕನ್ಯೆಯರ ಕಥೆ ಗೊತ್ತಾ ನಿಮಗೆ? ವಿಷ ಕನ್ಯೆಯರು ಎಲ್ಲಿಂದ ಹುಟ್ಟಿದ್ರು? ಮಾನವ ಹುಟ್ಟಿದಾಗಿನಿಂದ ಅವರನ್ನ ಬಳಸಿಕೊಳ್ಳುತ್ತಾ ಬಂದರು. ಏಕೆ ಬಳಿಸಿದ್ರು, ಯಾವ ಕಾಲದಲ್ಲಿ ಏನಕ್ಕೆ ಬಳಸಿದ್ರು. ಅಧಿಕಾರದ ಆಸೆಗೆ ಇನ್ನೊಬ್ಬನ್ನ ಮುಗಿಸಲು ಇರೋದು. ಇದೆಲ್ಲಾ ಇತಿಹಾಸಲ್ಲಿ ಬಂದಿದೆ. ಇದೆಲ್ಲಾ ಹೊಸದಾಗಿ ಬಂದಿಲ್ಲ. ಎಲ್ಲಾ ವಿಷ ಕನ್ಯೆಯರು ಇರ್ತಿದ್ರು. ಈಗ್ಲೂ ಅದೇ ರೀತಿ ನಡೆಸುತ್ತಿದ್ದಾರೆ ಎಂದು ನುಡಿದರು.