ಮಂಡ್ಯ: ಚಿಕ್ಕನಾಯಕನಹಳ್ಳಿಯಲ್ಲಿನ ವೃತ್ತಕ್ಕೆ ಹೆಸರಿಡುವ ಕುರಿತ ವಿವಾದ ತಾರಕಕ್ಕೇರಿದ್ದು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲ್ಲ, ಬದಲಿಗೆ ಕನಕ ವೃತ್ತ ಎಂದು ಹೆಸರಿಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಹುಳಿಯಾರು ಕನಕ ವೃತ್ತ ತೆರವುಗೊಳಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಬೆಳಗಾವಿಯಲ್ಲಿದ್ದಾಗ ಕನಕ ವೃತ್ತ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂಬ ಹೆಸರಿನ ನಾಮಫಲಕಗಳನ್ನು ಹಾಕಲು ಎರಡು ಗುಂಪುಗಳು ಮುಂದಾಗಿದ್ದವು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಶಾಂತಿಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಮುಂದಾಗಿದ್ದೆ. ಸ್ವಾಮೀಜಿಯವರಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದೆ. ಬಳಿಕ ನಡೆದ ಸಭೆಯಲ್ಲಿ ಕನಕ ವೃತ್ತ ಹೆಸರಿಡಲು ಎದುರಾಗಿರುವ ಕಾನೂನು ತೊಡಕುಗಳನ್ನ ಗಮನಕ್ಕೆ ತಂದಿದ್ದೆ. ನಂತರ ಕನಕ ವೃತ್ತ ಎಂದೆ ಹೆಸರಿಡೋಣ ಎಂದು ಸ್ವಾಮೀಜಿಗೆ ತಿಳಿಸಿದೆ.
Advertisement
Advertisement
ಹುಳಿಯಾರು ಈ ಹಿಂದೆ ಗ್ರಾಮ ಪಂಚಾಯಿತಿಯಾಗಿತ್ತು. ಈಗ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೇರಿದೆ. ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಕನಕ ವೃತ್ತ ಎಂದು ಹೆಸರಿಡೋಣ ಅಂತ ಹೇಳಿದೆ. ಈ ವೇಳೆ ಕಾಗಿನೆಲೆ ಶ್ರೀಗಳು ಈಗಲೇ ಆಗಬೇಕೆಂದು ಪಟ್ಟು ಹಿಡಿದರು. ಆ ವೇಳೆ ನಾನು ಶ್ರೀಗಳ ಮೇಲೆ ರೇಗಿದ್ದು ನಿಜ. ಇದಾದ ಬಳಿಕ ಯಾರ್ಯಾರೋ ದಿನ ನಿತ್ಯ ಕರೆ ಮಾಡಿ ನೀವು ಕುರುಬರ ವಿರೋಧಿ ಎಂದು ಕೇಳುತ್ತಿದ್ದರು. ನಾನು ಕುರುಬ ಸಮುದಾಯದ ಬೆಂಬಲದಿಂದಲೇ ಚಿಕ್ಕನಾಯಕನಹಳ್ಳಿಯಲ್ಲಿ ಗೆದ್ದು ಬಂದಿದ್ದೇನೆ. ನನ್ನ ಜೊತೆ ಆ ಸಮುದಾಯದ ಮುಖಂಡರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
Advertisement
ನಾನು ಅಧಿಕಾರದಲ್ಲಿ ಇರುವವರೆಗೂ ಆ ವೃತ್ತಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಬಿಡಲ್ಲ. ಶ್ರೀಗಳ ಹೆಸರಿಟ್ಟು ನಾನು ಜಾತಿವಾದಿ ಆಗಲು ತಯಾರಿಲ್ಲ. ದಾಸ ಶ್ರೇಷ್ಠ ಕನಕ ವೃತ್ತ ಎಂದೇ ನಾಮಕರಣ ಮಾಡುತ್ತೇನೆ ಎಂದು ಹೇಳಿದ್ದೇನೆ. ಹೀಗಿರುವಾಗ ಇವತ್ತು ಒಬ್ಬ ಕರೆ ಮಾಡಿ ನೀವು ಒಂದು ಸಮಾಜಕ್ಕೆ ಮಾತ್ರ ಮಂತ್ರೀನ ಎಂದು ಕೇಳಿದ, ಹೂ ಅಂದೆ. ಸಿಟ್ಟಾಗಿ ಬೈದು ಫೋನ್ ಕಟ್ ಮಾಡಿದೆ. ಆ ಆಡಿಯೋವನ್ನು ವಾಟ್ಸಪ್ ಮೂಲಕ ವೈರಲ್ ಮಾಡಿ ವಿವಾದ ಸೃಷ್ಠಿಸುತ್ತಿದ್ದಾರೆ. ಉಪ ಚುನಾವಣೆ ಗುರಿಯಾಗಿಟ್ಟುಕೊಂಡೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.