ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮನವಿ ಮೇರೆಗೆ ಡಾಲರ್ಸ್ ಕಾಲೋನಿಯ ರಾಜಕಾಲುವೆಗೆ ಮೇಲ್ಛಾವಣಿ ಹಾಕಲಾದ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಾಜಕಾಲುವೆ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯ ಎಂಜಿನಿಯರ್ ಬೆಟ್ಟೆಗೌಡ, ಕೊಳಚೆ ಇರುವುದು, ಕೆಟ್ಟ ವಾಸನೆ ಬರುವುದು. ಇಂತಹ ಲುಕ್ ನೋಡಿದಾಗ ಸುತ್ತಮುತ್ತಾ ಇರುವ ಪರಿಸರವನ್ನು ನೋಡಿ ಚೆನ್ನಾಗಿದ್ದರೂ ಕೂಡ ಅದೊಂದು ಕಡೆ ಬ್ಲಾಕ್ ಮಾರ್ಕ್ ಉಳಿದುಕೊಳ್ಳುತ್ತದೆ. ಆದ್ದರಿಂದ ಮುಂಬೈನಲ್ಲಿ ಈ ರೀತಿಯಾಗಿ ವ್ಯವಸ್ಥಿತವಾಗಿ ರಾಜಕಾಲುವೆಗಳನ್ನು ಮುಖ್ಯರಸ್ತೆಗಳಲ್ಲಿ ಮುಚ್ಚಲಾಗಿದೆ. ಇದನ್ನು ಗಮನಿಸಿ ಇಲ್ಲಿ ಪ್ರಾಯೋಗಿಕವಾಗಿ ಈ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಜಯಮಾಲಾ ಮನವಿ ಮಾಡಿದ್ದರು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿಯಾಗಿ ಬೇರೆಕಡೆ ಮಾಡಿದ್ದಾರೆ. ನಮ್ಮ ನಗರದಲ್ಲೂ ಮಾಡಿದರೆ ಹೇಗಿರುತ್ತದೆ ಎಂದು ಜಯಮಾಲಾ ಅವರು ಈ ಹಿಂದೆ ಹೇಳಿದ್ದರು. ಕೇವಲ ಜಯಮಾಲಾ ಅಲ್ಲ ಅಲ್ಲಿರುವ ಎಲ್ಲಾ ರಾಜಕಾರಣಿಗಳು ಹೇಳಿದ್ದರು. ಅವರು ನಮ್ಮ ಮನೆಯ ಬಳಿ ಮಾಡಿ ಅಂತ ಹೇಳಿಲ್ಲ. ಇದರಿಂದ ದುಂದುವೆಚ್ಚ ಏನು ಹಾಗಿಲ್ಲ. ಈ ಮೇಲ್ಛಾವಣಿ ನಿರ್ಮಾಣ ಮಾಡಲು 2.5 ಕೋಟಿ ರೂ. ವೆಚ್ಚವಾಗಿದೆ ಎಂದು ಬೆಟ್ಟೆಗೌಡ ವಿವರಿಸಿದರು.
ವಿವಿಐಪಿಗಳಿರುವ ವಾರ್ಡ್ ಅಥವಾ ಮಿನಿಸ್ಟರ್ ಜಯಮಾಲಾ ಇದ್ದರೆ ಅನ್ನೋ ಉದ್ದೇಶಕ್ಕೆ ಕಾಮಾಗಾರಿ ಮಾಡುತ್ತಿಲ್ಲ. ನಾವು ಕೂಡ ಮೇಲ್ಚಾವಣಿ ಹಾಕಿದರೆ ಯಾವ ರೀತಿ ಕಾಣುತ್ತದೆ. ಒಂದು ವೇಳೆ ಈ ಮೇಲ್ಛಾವಣಿ ಹಾಕುವುದರಿಂದ ಉಪಯೋಗವಾದರೆ ಸಾರ್ವಜನಿಕರ ಅಭಿಪ್ರಾಯ ಪಡೆದು ನಗರದ ಪ್ರಮುಖ ರಸ್ತೆಗಳಲ್ಲಿ ಮಾಡಲಾಗುತ್ತದೆ ಎಂದು ಬೆಟ್ಟೆಗೌಡ ಹೇಳಿದ್ದಾರೆ.
ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪ್ರತಿಕ್ರಿಯಿಸಿ, 300 ಮೀಟರ್ ನ ರಾಜಕಾಲುವೆಯಲ್ಲಿ ಕೆಲಸ ನಡೆಯುತ್ತಿದೆ. ಮಾನ್ಯ ಸಚಿವೆ ಜಯಮಾಲಾ ಅವರು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ. ಸದನ ಸಮಿತಿಯ ಒಪ್ಪಿಗೆ ಪಡೆದುಕೊಂಡು ನಗರೋತ್ಪನ್ನ ಅನುದಾನದಲ್ಲಿ 2.5 ಕೋಟಿ ರೂ. ವೆಚ್ಛದಲ್ಲಿ ಈ ಕೆಲಸ ನಡೆಯುತ್ತಿದೆ. ಮುಂಬೈನ ಬಾಂದ್ರಾ ಸಿಟಿಯಲ್ಲಿ ಏರ್ ಪೋರ್ಟ್ ಇಳಿದ ತಕ್ಷಣ ಈ ಯೋಜನೆ ಮಾಡಿದ್ದಾರೆ. ಜಯಮಾಲಾ ಮೇಡಮ್ ನಮ್ಮ ಜಾಗದಲ್ಲಿ ಈ ಕಾಲುವೆ ಮಾಡಿ ಎಂದು ಹೇಳಿಲ್ಲ. ಆದರೆ ನಮ್ಮ ಅಧಿಕಾರಿಗಳು ಜಯಮಾಲ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಯೋಜನೆಗೆ ಅವರ ಶ್ರಮ ಹೆಚ್ಚಾಗಿದೆ ಎಂದು ಈ ಕಾಲುವೆ ಮಾಡಲು ಆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಾಗದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ ಪರಿಷತ್ ಸದಸ್ಯೆ ಜಯಮಾಲಾ ಪ್ರತಿಕ್ರಿಯಿಸಿ, ನಮ್ಮ ಏರಿಯಾದಲ್ಲಿ ಸೊಳ್ಳೆ ತುಂಬಾ ಇದೆ. ಮಕ್ಕಳಿಗೆ ತುಂಬಾ ಡೆಂಗ್ಯೂ ಬಂದಿದೆ. ಹೀಗಾಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ನಾನು ಸದನದಲ್ಲಿ ಮನವಿ ಮಾಡಿದ್ದೆ. ಎರಡು ಬಾರಿ ವಿಚಾರವನ್ನು ಪ್ರಸ್ತಾಪ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಬಳಿಕ ನಮ್ಮ ಏರಿಯಾದಲ್ಲಿ 159 ಜನರು ಒಂದು ಪತ್ರ ಬರೆದು ಸಹಿ ಮಾಡಿ ಎಂಎಲ್‍ಸಿ ಆಗಿದ್ದೀರಿ ಏನಾದರೂ ಮಾಡಿ ಎಂದು ಮನವಿ ಮಾಡಿಕೊಂಡರು. ನಾನು ಅದನ್ನು ಪಿಟಿಷನ್ ಕಮಿಟಿಗೆ ಹಾಕಿದೆ. ಎಂಎಲ್‍ಎ ಆಗಿದ್ದ ವೈ. ನಾರಾಯಣಸ್ವಾಮಿ ಅವರಿಗೆ ಹೇಳಿದೆ. ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಏನು ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದರು.