ಮಂಡ್ಯ: ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಮೇಲಿನವರು ಏನೋ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರೆ, ಅವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ನೀಡುರುವುದು ವೈಯಕ್ತಿಕ ಅಭಿಪ್ರಾಯವಾಗಿದೆ. ಒಬ್ಬೊಬ್ಬರ ಅಭಿಪ್ರಾಯಗಳು ಒಂದು ರೀತಿ ಇರುತ್ತವೆ. ಮೇಲೆ ಇರುವವರು ತೀರ್ಮಾನ ತೆಗೆದುಕೊಂಡಾಗ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುತ್ತೇನೆ ಎಂದರು.
ನಾವು ಅಮಿತ್ ಶಾ ಅವರ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗೆ ಇಲ್ಲ. ಮೇಲಿನವರು ಯಾವ ಯಾವ ಕಾರಣಕ್ಕೆ ಮಾಡುತ್ತಾರೆ ಎಂದು ಗೊತ್ತಿಲ್ಲ. ಅವರು ತೀರ್ಮಾನ ತೆಗೆದುಕೊಂಡಿರುವುದು ಪಕ್ಷಕ್ಕೆ ಒಳ್ಳೆಯಾದಾಗುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದೇ ವೇಳೆ ಮೂವರು ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಭಿನ್ನಮತ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಚಾಯ್ತಿ ಸದಸ್ಯ ಆದಾಗ ಅಧ್ಯಕ್ಷ ಆಗಬೇಕು ಎಂದು ಇರುತ್ತದೆ. ಹಾಗೆಯೇ ಶಾಸಕನಾದಾಗ ಮಂತ್ರಿ ಆಗಬೇಕು ಅನ್ನೋದು ಸಹಜ ಎಂದು ಹೇಳಿದರು.
ಕೇಂದ್ರದಿಂದ ಪ್ರವಾಹದ ಪರಿಹಾರ ಕುರಿತು ಇದೇ ವೇಳೆ ಮಾತನಾಡಿದ ಅವರು, ಪ್ರವಾಹ ಪೀಡಿತರಿಗೆ ನೆರವು ನೀಡಲು ಕಮಿಟಿ ಮಾಡಿ ತೀರ್ಮಾನ ಮಾಡಲಾಗಿದೆ. ತುರ್ತಾಗಿ ಮಾಡಬೇಕಾದದ್ದನ್ನು ರಾಜ್ಯ ಸರ್ಕಾರ ಮಾಡಿದೆ. 32 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸಮೀಕ್ಷೆ ಮಾಡಿದ್ದೇವೆ. 7 ರಂದು ಮೋದಿ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ನಾವು ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.