Connect with us

Davanagere

ಶಿಕ್ಷಣ ಇಲಾಖೆಯಲ್ಲೂ ಸೂಪರ್ ಸಿಎಂ ಕಮಾಲ್

Published

on

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳಾಗಿ ಅಧಿಕಾರಕ್ಕೆ ಬಂದಾಯ್ತು. ಜೆಡಿಎಸ್‍ನಿಂದ ಕುಮಾರಸ್ವಾಮಿ ಸಿಎಂ ಆಗಿದ್ದೂ ಆಯ್ತು. ಆದರೆ ಮೈತ್ರಿ ಸರ್ಕಾರದ ಆಡಳಿತ ಶುರುವಾಗಿನಿಂದ ಈ ತನಕ ಸಿಎಂಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದು ಸೂಪರ್ ಸಿಎಂ, ಸಚಿವ ಎಚ್.ಡಿ ರೇವಣ್ಣ. ಹೌದು ರಾಜ್ಯ ಸರ್ಕಾರದಲ್ಲಿ ಸಿಎಂ, ಡಿಸಿಎಂ ಹುದ್ದೆ ನಿರ್ವಹಿಸುವವರು ಇದ್ದರೂ ಸರ್ಕಾರಿ ಯೋಜನೆ, ಸಭೆ, ನಿರ್ಧಾರಗಳಲ್ಲಿ ಸಚಿವ ರೇವಣ್ಣ ಮೂಗು ತೂರಿಸುತ್ತಲೇ ಇದ್ದಾರೆ.

ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಸರ್ಕಾರದ ಸೂಪರ್ ಸಿಎಂ ಅನ್ನೋದು ಮತ್ತೊಮ್ಮೆ ಜಗಜ್ಜಾಹಿರಾಗಿದೆ. ಶಿಕ್ಷಣ ಇಲಾಖೆಯ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಮಾನ್ಯ ರೇವಣ್ಣನವರು ಶಿಕ್ಷಣ ಇಲಾಖೆ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಿದ್ದಾರೆ.

ಈ ಹಿಂದೆ ನೀಡಿದ್ದ 3 ವರ್ಷಗಳ 450 ಕೋಟಿ ವೆಚ್ಚದ 1,043 ಸರ್ಕಾರಿ ಶಾಲೆಗಳ 1,525 ಕೊಠಡಿಗಳು, 388 ಪ್ರೌಢಶಾಲೆಗಳ 878 ಕೊಠಡಿಗಳು, 91 ಕರ್ನಾಟಕ ಪಬ್ಲಿಕ್ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ 299 ಕೊಠಡಿಗಳ ಮರುನಿರ್ಮಾಣ, 86 ಪ್ರಯೋಗಾಲಯಗಳು, 154 ಶೌಚಾಲಯಗಳ ನಿರ್ಮಾಣದ ಜೊತೆಗೆ ಇಡೀ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತಂದಿದ್ದಾರೆ. ಈ ಬಗ್ಗೆ ಇದೇ 20 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಆರ್.ಎಸ್ ನಾಧನ್ ಆದೇಶಿಸಿದ್ದಾರೆ.

ಈ ಹಿಂದೆ ಶಾಲೆ ಮಟ್ಟದ ಎಸ್‍ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾದ್ಯಮ ಶಿಕ್ಷಣ ಅಭಿಯಾನ ಹಾಗೂ ಜಿಲ್ಲಾ ಪಂಚಾಯತಿಯ ಬಿಇಆರ್‍ಡಿ ಇಲಾಖೆ ಇಂತಹ ಕಾಮಗಾರಿ ನಿರ್ವಹಿಸುತ್ತಿತ್ತು. ಆದರೆ ಈಗ ಇಡೀ ಶಿಕ್ಷಣ ಇಲಾಖೆಯನ್ನೇ ನಿಷ್ಕ್ರೀಯ ಮಾಡಲು ಸಚಿವ ರೇವಣ್ಣ ನಿಂತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ತಮ್ಮ ಇಲಾಖೆಯ ಕೆಲಸದ ಜೊತೆಗೆ ಇನ್ನಿತರ ಇಲಾಖೆಯಲ್ಲೂ ಮೂಗು ತೂರಿಸುತ್ತಿರುವುದು ಸಿಎಂ ಕುಮಾರಸ್ವಾಮಿಗೆ ಮುಜುಗರ ಉಂಟು ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *