ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೋಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಬಂದರೂ ಲೂಟಿಕೋರರಿಗೆ ಶ್ರೀರಕ್ಷೆಯಾಗಿದ್ದು, ಮತ್ತೆ ಅಮಾನತು ಆಗಿದ್ದ ಅಧಿಕಾರಿಯನ್ನು ನೇಮಕ ಮಾಡಲು ಮನವಿ ಮಾಡಲಾಗಿದೆ.
ಸಣ್ಣ ಕೈಗಾರಿಗಳ ಸಚಿವ ಎಸ್.ಆರ್ ಶ್ರೀನಿವಾಸ್ ಭ್ರಷ್ಟ ಅಧಿಕಾರಿಯ ಮರುನೇಮಕಕ್ಕೆ ಕಡತ ನೀಡುವಂತೆ ಪತ್ರ ಬರೆದಿರೋದು ಬೆಳಕಿಗೆ ಬಂದಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಶಂಕರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಅಷ್ಟೇ ಅಲ್ಲದೇ ಆತನ ವಿರುದ್ಧ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶ ಪದ್ಮರಾಜ್ ನೇತೃತ್ವದಲ್ಲಿ ಕಮಿಟಿಯನ್ನು ಸಹ ರಚನೆ ಮಾಡಿತ್ತು.
ಕಮಿಟಿಯ ವರದಿಯಲ್ಲಿ ಶಂಕರ್ ವಿರುದ್ಧ ಹಲವು ಆರೋಪಗಳನ್ನು ಹೊರಿಸಿತ್ತು. ಇದರಿಂದ ಶಂಕರ್ ಅವರನ್ನು ಸಸ್ಪೆಂಡ್ ಸಹ ಮಾಡಲಾಗಿತ್ತು. ಕೋರ್ಟ್ ಸಹ ಅಮಾನತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಶಂಕರ್ ಅವರ ಮರು ನೇಮಕಕ್ಕೆ ಕಡತ ಕಳಿಸುವಂತೆ ಸಣ್ಣ ಕೈಗಾರಿಗಳ ಮಂತ್ರಿ ಶ್ರೀನಿವಾಸ್ ಪತ್ರ ಬರೆದಿರೋದು ಇದೀಗ ಅನುಮಾನಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೆ ವಿಧಾನ ಪರಿಷತ್ ಸದಸ್ಯ ಕಾಂತ್‍ರಾಜ್ ಸಹ ಶಂಕರ್ ಅವರ ಮರು ನೇಮಕಕ್ಕೆ ಒತ್ತಾಯ ಮಾಡಿರೋದು ಸರ್ಕಾರ ಭ್ರಷ್ಟರ ಪರ ವಕಾಲತ್ತು ವಹಿಸುತ್ತಿದೆ ಅನ್ನೋ ಟೀಕೆಗಳು ಕೇಳಿ ಬರುತ್ತಿವೆ.