ಕೋಲಾರ: ಕುಣಿಯಲಾಗವರಿಗೆ ನೆಲ ಡೊಂಕು ಎನ್ನುವ ರೀತಿ ಇವಿಎಂ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಟಾಂಗ್ ನೀಡಿದ್ದಾರೆ.
ಕೋಲಾರದ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಹೀಗಾಗಿ ದೇಶಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಅಲ್ಲದೆ ಮೋದಿಯವರಿಗೆ ಯಾವುದೇ ಆಸೆ ಆಮಿಷಗಳಿಲ್ಲ, ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಶಿಸ್ತಿನಿಂದ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ ಎಂದರು.
Advertisement
Advertisement
ಪ್ರಧಾನಿ ಮೋದಿ ಅವರಿಗೆ ಯಾವುದೇ ವೈಯಕ್ತಿಕ ಆಸೆಗಳಿಲ್ಲ. ಅವರು ಸೋಲಿಲ್ಲದ ಸರದಾರರಾಗಿದ್ದು, ಮೂರು ಹೊತ್ತು ಊಟ ಹಾಗೂ ದೇಶದ ಬಗ್ಗೆ ಮಾತ್ರ ಗಮನಹರಿಸುವಂತಹ ಪರೋಪಕಾರಿಯಾಗಿದ್ದಾರೆ ಎಂದು ಪ್ರಧಾನಿಯನ್ನು ಹಾಡಿ ಹೊಗಳಿದರು.
Advertisement
ಪ್ರವಾಹ ಪೀಡಿತ ಪ್ರದೇಶಗಳಿಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಲಾಗಿದ್ದು, ಅವರು ಆಯಾ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಶೀಘ್ರ ಪರಿಹಾರಕ್ಕಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಬಿಜೆಪಿ ನೆರೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದರು.