ಶಿವಮೊಗ್ಗ: ಸಂಕ್ರಮಣದ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದು ಅಥವಾ ಪುನರ್ ರಚನೆ ಯಾವುದಾದರೂ ಆಗಬಹುದು. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶಾಸಕರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಗೆದ್ದಿರುವ ಎಲ್ಲರಿಗೂ ಮಂತ್ರಿ ಸ್ಥಾನಕೊಡುವ ಬಗ್ಗೆ ಈಗಾಗಲೇ ಆಶ್ವಾಸನೆ ನೀಡಿದ್ದೇವೆ. ಮುಖ್ಯಮಂತ್ರಿ ಸಹ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.
ಇದೇ ವೇಳೆ ಚುನಾವಣೆಯಲ್ಲಿ ಸೋತಿರುವ ಇಬ್ಬರಿಗೆ ಮಂತ್ರಿ ಸ್ಥಾನ ನೀಡಲು ಏನು ಮಾಡಬೇಕು. ನಮ್ಮ ಕಾರ್ಯಕರ್ತರಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಕೇಂದ್ರದ ನಾಯಕರ ಜೊತೆ ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮರಾಠಿಗರ ಕುರಿತು ರಮೇಶ್ ಜಾರಕಿಹೊಳಿ ಯಾವ ಉದ್ದೇಶಕ್ಕೆ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಅವರ ಜೊತೆ ಮಾತನಾಡುತ್ತೇನೆ. ಮಹಾರಾಷ್ಟ್ರ ಗಡಿ ವಿಷಯದಲ್ಲಿ ಸುಮ್ಮನೆ ಕ್ಯಾತೆ ತೆಗೆಯುತ್ತಿದೆ. ಮಹಾರಾಷ್ಟ್ರಕ್ಕೆ ರಾಜ್ಯದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಡಿಸಿಎಂ ಹುದ್ದೆ ಕುರಿತು ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ಸ್ವತಃ ರೇಣುಕಾಚಾರ್ಯ ಅವರೇ ಡಿಸಿಎಂ ಹುದ್ದೆ ಕುರಿತು ಯಾವುದೇ ಸಹಿ ಸಂಗ್ರಹ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಹುದ್ದೆ ಕುರಿತು ವೈಯಕ್ತಿಕವಾಗಿ ಯಾವುದೇ ಅಭಿಪ್ರಾಯ ಇಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇನ್ನು ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿದ್ದು, ಹೆಚ್ಚಿನ ಅನುದಾನ ಸೇರಿದಂತೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಏನು ಬೇಕಾದರೂ ಘೋಷಣೆ ಮಾಡಬಹುದು ಎಂಬ ವಿಶ್ವಾಸವನ್ನು ಸಚಿವ ಈಶ್ವರಪ್ಪ ವ್ಯಕ್ತಪಡಿಸಿದರು.