ಬಳ್ಳಾರಿ: ನೂತನ ಸಚಿವರಾಗಿ ಸಂಪುಟ ಸೇರಿರುವ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಇಂದು ಸಾರ್ವಜನಿಕವಾಗಿ ಸಂಬಂಧಿ ಯುವಕನಿಂದ ಶೂ ಹಾಕಿಸಿಕೊಳ್ಳುವ ಮೂಲಕ ಅಧಿಕಾರದ ದರ್ಪ ತೋರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ದೇವರ ದರ್ಶನ ಪಡೆದರು. ಬಳಿಕ ದೇವಾಲಯದಿಂದ ಹಿಂದಿರುಗುವ ವೇಳೆ ಕಾರಿನ ಹಿಂಭಾಗದ ಡಿಕ್ಕಿಯಲ್ಲಿದ್ದ ಸಚಿವರ ಶೂವನ್ನು ಸಂಬಂಧಿ ಹುಡುಗ ಕೈಯಲ್ಲೇ ತಂದು ಕಾರಿನ ಮುಂಭಾಗದ ಸೀಟಿನಲ್ಲಿ ಕೂತಿದ್ದ ತುಕಾರಾಂ ಬಳಿ ತೆರಳಿ ಕಾಲಿನ ಮುಂದೆ ಇರಿಸಿದರು.
ಶಾಸಕರಾಗಿದ್ದ ವೇಳೆ ತಮ್ಮ ಸರಳ ಸಜ್ಜನಿಕೆಯಿಂದಲೇ ತುಕಾರಾಂ ಅವರು ಹೆಸರು ಪಡೆದಿದ್ದರು. ಆದರೆ ಸಚಿವ ಸ್ಥಾನ ಸ್ವೀಕರಸಿದ ಬಳಿಕ ಈ ರೀತಿಯ ವರ್ತನೆಯನ್ನು ಸಾರ್ವಜನಿಕವಾಗಿ ತೋರಿದ್ದು, ಅಧಿಕಾರ ಬಂದ ಕೂಡಲೇ ಬದಲಾಗುತ್ತಾರೆ ಎಂದ ಮಾತಿಗೆ ಸಾಕ್ಷಿಯಾಗಿ ಕಂಡಿತು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ವ್ಯಕ್ತಿಯಾದ ನನಗೆ ಹೈಕಮಾಂಡ್ ನನ್ನ ಕಾರ್ಯಗಳನ್ನು ಮೆಚ್ಚಿ ಸಚಿವ ಸ್ಥಾನ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ನನಗೆ ಅವಕಾಶ ನೀಡಿದ್ದು, ಯುವ ಜನಾಂಗ ಹಾಗೂ ಬಡ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ. 3 ಬಾರಿ ಶಾಸಕನಾಗಿ ನಾನು ಮಾಡಿದ ಕಾರ್ಯಗಳೇ ಸಚಿವ ಸ್ಥಾನ ನೀಡಲು ಕಾರಣ. ನಗರಕ್ಕೆ ಬಂದಾಗ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ನಂಬಿಕೆ, ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ರು.
ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಹಂಪಿ ಉತ್ಸವ ಆಚರಣೆ ಮಾಡಿಲ್ಲ. ಆದರೆ ಈಗ ಚರ್ಚೆ ನಡೆಸಿ ಉತ್ಸವ ನಡೆಸುವ ಚಿಂತನೆ ಇದೆ. ಜಿಲ್ಲೆಯ ಜನರ ಭಾವನೆಗೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv