ಶಿವಮೊಗ್ಗ: ಜಿಲ್ಲೆಯ ಕುಂಸಿ ಬಳಿ ನಡೆದ ಕಾರು ಅಪಘಾತದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಸಹಾಯಕ ಲೋಕೇಶ್ ಮತ್ತು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಲೋಕೇಶ್ ಜೊತೆ ಇದ್ದ ಮಹಿಳೆ ನೇತ್ರಾವತಿ ಎಂದು ಗುರುತಿಸಲಾಗಿದೆ. ನೇತ್ರಾವತಿ ಅವರು ವಿಧಾನಸೌಧದಲ್ಲಿ ಹಿರಿಯ ಸಹಾಯಕಿ ಎಂದು ತಿಳಿದು ಬಂದಿದೆ. ಲೋಕೇಶ್ ಮತ್ತು ನೇತ್ರಾವತಿ ಇಬ್ಬರೂ ಬೆಂಗಳೂರಿನಿಂದ ಸಾಗರ ಕಡೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತಗೊಂಡ ಕಾರಿನಲ್ಲಿ ಎರಡು ಸೂಟ್ ಕೇಸ್ ಗಳು ಪತ್ತೆಯಾಗಿವೆ. ಈ ಸೂಟ್ ಕೇಸ್ ಗಳಲ್ಲಿ ಹಣವಿತ್ತು ಎಂದು ಹೇಳಲಾಗುತ್ತಿದೆ. ಸದ್ಯ ಈ ಸೂಟ್ ಕೇಸ್‍ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಶಾಸಕ ಪ್ರಸನ್ನ ಕುಮಾರ್ ಇನ್ನಿತರರು ಶವಾಗಾರಕ್ಕೆ ಬಂದು, ಪರೀಕ್ಷೆ ನಡೆಸಿ, ಶವ ಕಳಿಸಲು ವಿಶೇಷ ಕಾಳಜಿ ತೋರಿದ್ದು, ಲೋಕೇಶ್ ಶವವನ್ನು ಅತಿ ತುರ್ತಾಗಿ ಮರಣೋತ್ತರ ಪರೀಕ್ಷೆ ಮಾಡಿಸಿ ಕಳಿಸಲಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನೇತ್ರಾವತಿ ಸಂಬಂಧಿಗಳು ಬರದ ಕಾರಣ ಶವಪರೀಕ್ಷೆ ನಡೆದಿಲ್ಲ.
ಲೋಕೇಶ್ ಮತ್ತು ನೇತ್ರಾವತಿ ಅಪಾರ ಮೊತ್ತದ ಹಣ ಪಡೆದು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ. ಈ ಅಪಘಾತ ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.