ಹುಬ್ಬಳ್ಳಿ: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿಗೆ ಆಗಮಿಸುವಂತೆ ಕರೆ ಬಂದಿದ್ದು, ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕುಂದಗೋಳ ಉಪಚುನಾವಣೆ ಜವಾಬ್ದಾರಿಯನ್ನ ವಹಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಡಿಕೆ ಶಿವಕುಮಾರ್ ಅವರು, ದೂರವಾಣಿ ಮೂಲಕ ಮಾತನಾಡಿದ ಹೈಕಮಾಂಡ್‍ಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದು, ಅನಾರೋಗ್ಯ ಸಮಸ್ಯೆ ಇರುವ ಕಾರಣ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.
ಇತ್ತ ಗುರುವಾರ ನಡೆಯಲಿರುವ ಸಂಪುಟ ಸಭೆಗೂ ಡಿಕೆ ಶಿವಕುಮಾರ್ ಅವರು ಗೈರು ಹಾಜರಿ ಆಗಲಿದ್ದು, ಹುಬ್ಬಳ್ಳಿಯಲ್ಲಿಯೇ ಉಳಿಯಲಿದ್ದಾರೆ. ಹುಬ್ಬಳ್ಳಿಯ ಕಾಟನ್ ಕೌಂಟಿ ರೆಸಾರ್ಟಿನಲ್ಲಿ ಅವರು ತಂಗಲಿದ್ದು, ಅಲ್ಲಿಯೇ ಕುಂದಗೋಳದ ಪ್ರಮುಖ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಪುನಃ ಕುಂದಗೋಳ ಉಪಚುನಾವಣೆ ಬಹಿರಂಗ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.