ಬೆಂಗಳೂರು: ಬಳ್ಳಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನನಗೆ ಜವಾಬ್ದಾರಿ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲವರು ಅಭಿನಂದಿಸಿದ್ರು, ಇನ್ನು ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ರು. ಇವುಗಳನ್ನೆಲ್ಲಾ ನಾನು ಬಹಳ ಸಂತೋಷದಿಂದಲೇ ಸ್ವೀಕರಿಸಿದ್ದೆ. ನಾನು ಈ ಚುನಾವಣೆಯಲ್ಲಿ 3 ಜನಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಬಳ್ಳಾರಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ಶ್ರೀರಾಮುಲು ಅಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ಶ್ರೀರಾಮುಲು ಅಣ್ಣನವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹಳ ಶಾಂತ ರೀತಿಯಿಂದ ಚುನಾವಣೆಯನ್ನು ನಡೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಯಾವ ಸಣ್ಣ ಕಾರ್ಯಕರ್ತರಲ್ಲಿ ಘರ್ಷಣೆಯನ್ನು ಉಂಟು ಮಾಡದೇ ಇದ್ದು, ಒಟ್ಟಿನಲ್ಲಿ ಈ ಚುನಾವಣೆ ಸುಲಲಿತವಾಗಿ ನಡೆಸಿಕೊಡಲು ಸಹಕಾರ ಮಾಡಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದಿರಬೋದು ಅಥವಾ ಸೋತಿರಬಹುದು. ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಬದಲಾಗಿ ನಮ್ಮಿಂದ ಯಾವುದೇ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನೋವಾಗಬಾರದು ಅಂತ ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಟಾಂಗ್ ನೀಡಿದ್ರು.
Advertisement
Advertisement
ಬಿಜೆಪಿ ಅಭ್ಯರ್ಥಿ ಶಾಂತ ಅವರು ಶಾಂತ ಸ್ವಾಭವದವರು. ನಮ್ಮ ಮತಯಾಚನೆಯ ವೇಳೆ ಎಲ್ಲಿಯೂ ಅಡ್ಡಿಪಡಿಸಲಿಲ್ಲ. ಉಗ್ರಪ್ಪನವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ಜೊತೆಯಲ್ಲಿ ಈ ಬಾರಿ ನಮ್ಮನ್ನು ಕೈ ಹಿಡಿದ ಜನತೆಗೆ ಹಾಗೂ ಬಳ್ಳಾರಿಯ ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
Advertisement
ಪಕ್ಷ-ಭೇದ, ಜಾತಿ-ಧರ್ಮ ಇವನ್ನೆಲ್ಲಾ ಬಿಟ್ಟು ಒಗ್ಗಟ್ಟಿನಿಂದ ಮತದಾರರು ಬಳ್ಳಾರಿಗೆ ಇಂದು ಧ್ವನಿಯಾಗಿರಬೇಕು, ಉಗ್ರಪ್ಪನವರು ನಮ್ಮ ವಿಚಾರವನ್ನು ಕರ್ನಾಟಕ ಸರ್ಕಾರದಲ್ಲಿ ಹೋರಾಟ ಹಾಗೂ ಪಾರ್ಲಿಮೆಂಟಿನಲ್ಲಿ ಧ್ವನಿಯೆತ್ತುವ ಭರವಸೆ ನೀಡಿದ್ದರು. ಹೀಗಾಗಿ ಮತದಾರರು ಅವರಿಗೆ ಮತ ಹಾಕಿ ಆ ಅವಕಾಶವನ್ನು ಉಗ್ರಪ್ಪ ಅವರಿಗೆ ನೀಡಿದ್ದಾರೆ ಎಂದರು.
Advertisement
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ:
ಆದ್ರೆ ಇಲ್ಲಿ ನಾನು ಗೆದ್ದುಬಿಟ್ಟಿದ್ದೀನಿ ಅಂತ ಹಿಗ್ಗಲು ತಯಾರಿಲ್ಲ. ಯಾಕಂದ್ರೆ ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯವಾಗುತ್ತದೆ. ಐದೂವರೆ ತಿಂಗಳ ಚುನಾವಣೆಗೆ ನಾನು ವೋಟ್ ಕೇಳಿಲ್ಲ. ಡಿಕೆಶಿ ಅವರು ಇಂದು ಬಾಂಬ್ ಸಿಡಿಸುತ್ತಾರೆ ಅಂತ ಮಾಧ್ಯಮ ಮಿತ್ರರು ಹೇಳಿದ್ದರು. ನನ್ನ ಬಾಂಬ್ ಇಂದು ಬಳ್ಳಾರಿಯ ಅಭಿವೃದ್ಧಿಗೆ ಸಿಡಿಸ್ತೀನಿ. ನನ್ನ ಕಾರ್ಯಕ್ರಮ, ಯೋಜನೆ ಹಾಗೂ ಆಚಾರ-ವಿಚಾರ ಮತ್ತು ಮಾಡಿದಂತಹ ಪ್ರಚಾರ ಎಲ್ಲವೂ ಬಳ್ಳಾರಿಯ ಜನತೆಗೆ ಸರಿಯಾದ ರೀತಿಯ ನ್ಯಾಯವನ್ನು ಒದಗಿಸಿಕೊಡಬೇಕಾಗಿದೆ. ಅಲ್ಲಿರುವಂತಹ ಧೂಳನ್ನು ತೆಗೆಯುವಂತದ್ದು, ಉದ್ಯೋಗ ಸೃಷ್ಟಿ, ವಲಸೆ ಹೋಗುತ್ತಿರುವ ಯುವಕರಿಗೆ ಉದ್ಯೋಗ, ಕುಡಿಯುವ ನೀರು, ರಸ್ತೆ ಒದಗಿಸುವಂತಹ ಬಹಳ ದೊಡ್ಡ ಸವಾಲಿದೆ. ಈ ಸವಾಲನ್ನು ಚುನಾವಣೆಯ ಗೆಲುವು ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಿದೆ ಅಂದ್ರು.
ಜನಾರ್ದನ ಅಣ್ಣನವರು ಕೂಡ ಸಾಕಷ್ಟು ಸವಾಲುಗಳನ್ನು ಎಸೆದಿದ್ದಾರೆ. ಮಾಧ್ಯಮ ಹಾಗೂ ವಿರೋಧ ಪಕ್ಷದವರ ಸವಾಲುಗಳನ್ನೆಲ್ಲಾ ಬಹಳ ಸಂತೋಷದಿಂದಲೇ ಸ್ವೀಕಾರ ಮಾಡಿದ್ದೇವೆ ಅಂತ ಹೇಳಿದ್ರು.
ಸಾವು, ಸೋಲಿಗೆ ಹೆದರುವವನಲ್ಲ:
ಇದೇ ವೇಳೆ ಪಬ್ಲಿಕ್ ಟಿವಿಯಲ್ಲಿ ಶ್ರೀರಾಮುಲು ಹಾಗೂ ಡಿಕೆಶಿಯ ಪಂಥಾಹ್ವಾನ ಪ್ರಸ್ತಾಪಿಸಿದ ಡಿಕೆಶಿ, ನಾನು ಚರ್ಚೆಗೆ ಬರಲು ಸಿದ್ಧನಿದ್ದೆ, ಆದ್ರೆ ರಾಮುಲು ಅಣ್ಣ ಬರಲಿಲ್ಲ. ನಾನು ಪಲಾಯನ ಮಾಡಿಲ್ಲ. ಚುನಾವಣೆಯಲ್ಲಿ ನಿಂತವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಹುಟ್ಟಿದವರೆಲ್ಲ ನಿರಂತರವಾಗಿ ಬದುಕಲು ಸಾಧ್ಯವಿಲ್ಲ. ಯಾವತ್ತಾದರೂ ಒಂದು ದಿನ ಸಾಯಲೇಬೇಕು. ಹೀಗಾಗಿ ಈ ಸಾವು ಹಾಗೂ ಸೋಲಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವವನು ಈ ಡಿಕೆಶಿವಕುಮಾರ್ ಅಲ್ಲ ಅಂತ ತಿಳಿಸಿದ್ರು.
ಬಳ್ಳಾರಿಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ:
ಇವತ್ತು ದೀಪಾವಳಿ. ಈ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಮಹಾಜನತೆಗೆ ನನ್ನ ವೈಯಕ್ತಿಕವಾಗಿ, ಸರ್ಕಾರದ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬಳ್ಳಾರಿಗೆ ಹೋಗುವ ಬಗ್ಗೆ ಇಂದು ನಾನು ನಿರ್ಧಾರ ಮಾಡಿಲ್ಲ. 5 ಕ್ಷೇತ್ರದಲ್ಲೂ ಚುನಾವಣಾ ಫಲಿತಾಂಶ ಹೊರಬಿದ್ದಿಲ್ಲ. ಇನ್ನೂ ಮತ ಎಣಿಕೆ ನಡೀತಾ ಇದೆ. ಹೀಗಾಗಿ ಕೊನೆಯ ಸುತ್ತಿನಲ್ಲಿ ರಾಜಕಾರಣದಲ್ಲಿ ಏನ್ ಬೇಕಾದ್ರೂ ಆಗಬಹುದು. ಇದರ ಅನುಭವ ನಮಗಿದೆ. ಲೀಡ್ ನಲ್ಲಿದ್ದವರು ಒಂದೇ ಬಾರಿಗೆ ಕೆಳಗಿಳಿದ ಅನೇಕ ಉದಾಹರಣೆಗಳು ಇವೆ ಅಂತ ಡಿಕೆಶಿ ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv