ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಗಳು ನೀಡಿದ ನೋಟಿಸ್‍ಗೆ ಉತ್ತರವಾಗಿ ಕಾನೂನಿಗೆ ಗೌರವ ಕೊಟ್ಟು ನಾನು, ನನ್ನ ತಾಯಿ ಐಟಿ ಕಚೇರಿಗೆ ಹೋಗಿದ್ದೇವು ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿಯಾಗಿದ್ದು, ಮಾಧ್ಯಮಗಳಿಗೆ ಗೌರವ ಕೊಡಬೇಕಿದೆ. ನಮ್ಮ ತಾಯಿ ಅವರ ಬಳಿ ಐಟಿ ಅಧಿಕಾರಿಗಳು ಹೇಳಿಕೆ ಪಡೆದುಕೊಳ್ಳಲು ಊರಿಗೆ ಹೋಗಿದ್ದರು. ಆದರೆ ಅಂದು ನನ್ನ ತಾಯಿ ಊರಲ್ಲಿ ಇರಲಿಲ್ಲ. ಪರಿಣಾಮ ನೋಟಿಸ್ ಕೊಟ್ಟಿದ್ದರು. ಆದ್ದರಿಂದ ನಾನು ಮತ್ತು ನನ್ನ ತಾಯಿ ಕಾನೂನಿಗೆ ಗೌರವ ಕೊಟ್ಟು ಐಟಿ ಕಚೇರಿಗೆ ಹೋಗಿದ್ದೇವು ಎಂದು ತಿಳಿಸಿದರು.
ವಿಚಾರಣೆಗೆ ನಡೆಸುವ ವೇಳೆ ನನಗೆ ಹೋಗಲು ಅವಕಾಶ ಇರಲಿಲ್ಲ. ಆದರೆ ನಮ್ಮ ತಾಯಿಗೆ 80 ವರ್ಷ ವಯಸ್ಸು ಆಗಿರುವ ಕಾರಣ, ತಾಯಿಗೆ ಸಹಕರಿಸಲು ಅಧಿಕಾರಿಗಳು ಅವಕಾಶ ಕೊಟ್ಟಿದ್ದರು. ಆದರೆ ನಾನು ತಪ್ಪು ಮಾಡಿಲ್ಲ, ಕಾನೂನಿನ ಪ್ರಕಾರವೇ ಎಲ್ಲವನ್ನು ಮಾಡಿದ್ದೇನೆ. ಇಂದು ನಡೆದ ವಿಚಾರಣೆ ವೇಳೆಯೂ ನನ್ನ ತಾಯಿಗೆ ತಿಳಿದಿದ್ದಷ್ಟು ಹೇಳಿದ್ದಾರೆ. ಅವರಿಗೆ ಅಧಿಕಾರಿಗಳು ಕೂಡ ಗೌರವ ಕೊಟ್ಟಿದ್ದಾರೆ. ಕಾನೂನಿನಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಆದರೆ 80 ವರ್ಷದ ತಾಯಿಯನ್ನ 6 ಗಂಟೆಗಳ ಕಾಲ ಕೂರಿಸಿಕೊಂಡಿದ್ದರು ಎಂಬುದು ನನಗೆ ನೋವು ತಂದಿದೆ. ಆದರೆ ನಾನು ಹೋರಾಟ ಮಾಡುತ್ತೇನೆ, ಎಲ್ಲದಕ್ಕೂ ಉತ್ತರ ನೀಡಬಲ್ಲೆ. ನನ್ನನ್ನು ವಿಚಾರಣೆಗೆ ಕರೆಯುವ ಸಂದರ್ಭಗಳು ಬರುತ್ತವೆ ಎಂದು ತಿಳಿಸಿದರು.
ಈ ಹಿಂದೆಯೇ ನನಗೆ ಹಲವು ನೋಟಿಸ್ ಬಂದಿದೆ. ಆ ಬಗ್ಗೆ ಮಾಹಿತಿ ನೀಡಲು ಸದ್ಯ ಸಾಧ್ಯವಿಲ್ಲ. ಆದರೆ ನನ್ನನ್ನು ಇಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಪರಿಣಾಮ ನಾನು ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಈ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದ ವೇಳೆಯೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ಈಗ ಹೆಚ್ಚೇನು ಮಾತನಾಡಲ್ಲ ಎಂದರು.
ಇದೇ ವೇಳೆ ಸಿನಿಮಾ ನಟರ ಮೇಲೆ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿನಿಮಾ ನಟರ ಪಕ್ಕದ ಮನೆಯ ನಿವಾಸಿ. ಬೆಳಗಾದರೆ ಒಬ್ಬರ ಮುಖ ಒಬ್ಬರು ನೋಡಬೇಕು. ಆದ್ದರಿಂದಲೇ ನಾನು ನಿನ್ನೆ ಅಲ್ಲಿ ನಿಂತು ಮಾತನಾಡಿಸಿದ್ದೆ. ಆದರೆ ಅಲ್ಲಿ ತನಿಖೆ ಪೂರ್ಣಗೊಳಿಸಿರಲಿಲ್ಲ. ವಿಷಯ ತಿಳಿಯುತ್ತಿದಂತೆ ವಾಪಸ್ ಮನೆಗೆ ಬಂದೆ ಅಷ್ಟೇ. ಕಾನೂನಿನಲ್ಲಿ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv