Districts
ನಾಡದೇವತೆ ಚಾಮುಂಡಿಗೆ 31 ಕೆ.ಜಿ ತೂಕದ 2 ಬೆಳ್ಳಿ ಆನೆ ಅರ್ಪಿಸಿದ ಡಿಕೆಶಿ

ಮೈಸೂರು: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ 31 ಕೆಜಿ ತೂಕದ ಎರಡು ಬೆಳ್ಳಿ ಆನೆಗಳನ್ನ ಅರ್ಪಿಸಿದ್ದಾರೆ.
ಪತ್ನಿ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ಎರಡು ದೊಡ್ಡ ಬೆಳ್ಳಿ ಆನೆಗಳನ್ನ ದೇವಿಗೆ ಸಲ್ಲಿಸಿದ್ರು. ಆದಾಯ ತೆರಿಗೆ ಇಲಾಖೆ ದಾಳಿ ನಂತರ ದೇವಸ್ಥಾನಕ್ಕೆ ಆಗಮಿಸಿ ಡಿಕೆಶಿ ಹರಕೆ ಕಟ್ಟಿಕೊಂಡಿದ್ದರು. ಹೀಗಾಗಿ ಇವತ್ತು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಆನೆ ಸಮರ್ಪಣೆ ಮಾಡಿದ್ದಾರೆ. ಭಾನುವಾರದಂದು ಡಿಕೆಶಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ತೀರಿಸಿದ್ದರು.
ಹರಕೆ ತೀರಿಸಿದ ನಂತರ ಮಾತನಾಡಿದ ಡಿಕೆಶಿ, ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ. ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ಅಂದುಕೊಂಡಿದ್ದು ಈಡೇರಿದೆ. ಇದರಿಂದ ಹರಕೆ ತೀರಿಸಿದ್ದೇನೆ. ಏನು ಅಂದುಕೊಂಡಿದ್ದೆ. ಏನು ಆಯಿತು ಎನ್ನುವುದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ. ಇದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಮನಸ್ಸಿನಲ್ಲಿ ಏನೋ ಇಟ್ಟುಕೊಂಡಿದ್ದೇನೆ. ಮುಂದೆ ಇನ್ನೇನೂ ಇಟ್ಟುಕೊಂಡಿರುತ್ತೇವೆ. ಹೀಗಾಗಿ ಇಂತಹ ಭಕ್ತಿ ಸಮರ್ಪಣೆ ಅಂತ ಹೇಳಿದ್ರು.
ನಾನು ಯಾವತ್ತೂ ತಪ್ಪು ಮಾಡಿಲ್ಲ. ಮೋಸ ಮಾಡಿಲ್ಲ. ದಗಲ್‍ಬಾಜಿ ಮಾಡಿಲ್ಲ. ಇದರಿಂದ ದೇವಿ ನನಗೆ ಸದಾ ರಕ್ಷಣೆ ಮಾಡುತ್ತಾಳೆ. ಕಳ್ಳತನ ಮಾಡಿದವರಿಗೆ, ಮೋಸ ಮಾಡಿದವರಿಗೆ ಭಯ ಇರಬೇಕು. ನನಗೆ ಅಂತಹ ಭಯ ಇಲ್ಲ. ಕುಕ್ಕೆಯಲ್ಲಿ ನನ್ನ ಅಭಿಮಾನಿಗಳ ಹರಕೆಯಂತೆ ನಿನ್ನೆ ತುಲಾಭಾರ ಮಾಡಿಸಿದ್ದೇನೆ. ಆದಾಯ ತೆರಿಗೆ ಇಲಾಖೆ ದಾಳಿಗೂ ಇದಕ್ಕೂ ಸಂಬಂಧ ಇಲ್ಲ ಅಂದ್ರು.
