ಧಾರವಾಡ (ಕುಂದಗೋಳ): ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಕ್ಷೇತ್ರ ಕುಂದಗೋಳ ಅಖಾಡಕ್ಕೆ ಕೊಟ್ಟ ಮಾತಿನಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿಯಾಗಿದ್ದಾರೆ.
ಇದೇ 19ರಂದು ನಡೆಯಲಿರುವ ಕುಂದಗೋಳ ಉಪಚುನಾವಣೆ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಈಗಾಗಲೇ ಕುಸುಮಾ ಶಿವಳ್ಳಿ ಉಮೇದುವಾರಿಕೆ ಸಲ್ಲಿಸಿದ್ದು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ. ಮಾರ್ಚ್ 22ರಂದು ಶಿವಳ್ಳಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸಚಿವ ಡಿಕೆ ಶಿವಕುಮಾರ್ ಆಪ್ತ ಗೆಳೆಯ ಶಿವಳ್ಳಿಯವರನ್ನು ನೆನೆದು ಭಾವುಕರಾಗಿದ್ದರು. ಶಿವಳ್ಳಿ ಕುಟುಂಬದ ಜೊತೆ ಸದಾ ಇರ್ತೀನಿ, ಅವರನ್ನು ಕೈ ಬಿಡಲ್ಲ ಅಂತ ಕಣ್ಣೀರು ಹಾಕಿದ್ದರು.
ಈಗ ಸಚಿವ ಡಿಕೆಶಿ ಉಸ್ತುವಾರಿಯಾಗಿರೋದ್ರಿಂದ ಕುಸುಮಾ ಶಿವಳ್ಳಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ ಮಾಸ್ಟರ್ ಮೈಂಡ್ ಶಿವಕುಮಾರ್ ಎಂಟ್ರಿಯಿಂದ ಕಾಂಗ್ರೆಸ್‍ನಲ್ಲಿನ ಬಂಡಾಯ ಶಮನವಾಗುತ್ತೆ ಅನ್ನೋ ಹುಮ್ಮಸ್ಸು ಕುಸುಮಾ ಅವರಲ್ಲಿ ಕಾಣುತ್ತಿದೆ.
ಇತ್ತ ಕುಂದಗೋಳದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಬಂಡಾಯ ಶಮನಕ್ಕೆ ಭಾರೀ ಕಸರತ್ತು ನಡೆದಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿರೋದ್ರಿಂದ ಬುಧವಾರ ಇಡೀ ದಿನ ಬಂಡಾಯ ಶಮನ ಯತ್ನ ನಡೆಯಿತು. ಹುಬ್ಬಳ್ಳಿಯಲ್ಲಿ ಕೈ ಬಂಡಾಯ ಅಭ್ಯರ್ಥಿಗಳಾದ ಶಿವಾನಂದ್ ಬೆಂತೂರು, ಹಜರತ್ ಅಲಿ ಜೋಡಮನಿ ಸೇರಿ ಹಲವರ ಬಂಡಾಯ ಶಮನಕ್ಕೆ ಸಚಿವ ಜಮೀರ್ ಅಹ್ಮದ್ ಭಾರೀ ಸರ್ಕಸ್ ಮಾಡಿದರು.
ಸಭೆಯ ಬಳಿಕ ಮಾತನಾಡಿದ ಬಂಡಾಯ ಅಭ್ಯರ್ಥಿ ಶಿವನಾಂದ್ ಬೆಂತೂರು ಕಣದಲ್ಲಿರಬೇಕೆಂಬುದು ನನ್ನ ಅಚಲ ನಿರ್ಧಾರ. ಆದ್ರೆ ಹಿತೈಷಿಗಳ ಜೊತೆ ಸಭೆ ನಡೆಸಿ, ಅವರು ಬೇಡ ಅಂದ್ರೆ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದರು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ, ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಗುರುವಾರ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ತಿಳಿಸಿದರು.