ಬೆಂಗಳೂರು: ಮೇಕೆದಾಟು ಸಮಸ್ಯೆಯನ್ನು ಬಗೆಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ, ತಮಿಳುನಾಡು ಸರ್ಕಾರ ಯೋಜನೆಗೆ ತಡೆ ಕೋರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೇ ಕಾನೂನು ಹೋರಾಟಕ್ಕೂ ಸಹ ತಜ್ಞರನ್ನು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ವಾಸ್ತವಾಂಶ ತಿಳಿಸಲು ಡಿ.ಕೆ.ಶಿವಕುಮಾರ್ ಪತ್ರ ಬರೆದು, ಭೇಟಿಗೆ ಅವಕಾಶ ಕೋರಿದ್ದಾರೆ.
Advertisement
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ತಪ್ಪು ಕಲ್ಪನೆಯನ್ನು ಹೊಂದಿದೆ. ಹೀಗಾಗಿ ಯೋಜನೆಯ ವಾಸ್ತವಾಂಶ ತಿಳಿಸಲು ತಮಿಳುನಾಡು ಮುಖ್ಯಮಂತ್ರಿ ಭೇಟಿಗೆ ಪತ್ರ ಬರೆದಿದ್ದೇವೆ. ಮೇಕೆದಾಟು ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಬಯಸಿದೆ. ಆದರೆ ಬಿಕ್ಕಟ್ಟು ಬಗೆಹರಿಸಲು ತಮಿಳುನಾಡು ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.
Advertisement
ತಮಿಳುನಾಡಿನ ಜಾಗದಲ್ಲಿ ನಾವು ಮೇಕೆದಾಟು ಮಾಡುತ್ತಿಲ್ಲ. ನಮ್ಮ ಜಾಗದಲ್ಲಿ ನಾವು ಅಣೆಕಟ್ಟೆ ನಿರ್ಮಿಸುತ್ತಿದ್ದೇವೆ. ಮೇಕೆದಾಟು ಅಣೆಕಟ್ಟೆ ನೀರನ್ನು ಕೃಷಿಗೆ ಉಪಯೋಗಿಸಲು ಬರುವುದಿಲ್ಲ. ಮೇಕೆದಾಟು ನೀರನ್ನು ತಗೆದುಕೊಂಡು ನೀರಾವರಿ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಹಣ ಮತ್ತು ನಮ್ಮ ಜಾಗದಲ್ಲಿ ಯೋಜನೆ ಮಾಡುತ್ತಿದ್ದೇವೆ. ಮೇಕೆದಾಟುವಿನಿಂದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು. ಇದನ್ನು ಬಿಟ್ಟರೆ ಯಾವುದೇ ಬಳಕೆ ಮಾಡಿಕೊಳ್ಳಲು ಆಗುವುದಿಲ್ಲವೆಂದು ತಿಳಿಸಿದರು.
Advertisement
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ನಮಗೆ ಬೇರೆ ರಾಜ್ಯದ ಮೇಲೆ ಯಾವುದೇ ದ್ವೇಷ ಇಲ್ಲ. ಅವರು ನಮ್ಮ ಸಹೋದರರು. ಅವರೂ ಸಹ ನಮ್ಮ ಜೊತೆ ಮಾತಾಡಬೇಕು. ನಾವು ಅವರ ಜೊತೆ ಮಾತಾಡಬೇಕು. ಅವರನ್ನು ಬಿಟ್ಟು ನಾವು ಯೋಜನೆ ಮಾಡಲು ಆಗುವುದಿಲ್ಲವೆಂದು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv