ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಬಳ್ಳಾರಿಗೆ ಆಗಮಿಸಿದ್ದು, ಅಭಿಮಾನಿಯೊಬ್ಬ 410 ಕೆಜಿ ಸೇಬು ಹಣ್ಣಿನ ಹಾರವನ್ನು ಹಾಕಿ ಸನ್ಮಾನಿಸಿದ್ದಾರೆ.
ಎನ್‍ಎಸ್‍ಯುಐ ಸಂಘಟನೆಯ ಜಿಲ್ಲಾಧ್ಯಕ್ಷ ಹಳ್ಳೇಗೌಡ ಸೇಬಿನ ಹಾರ ಮಾಡಿಸಿದವರು. 45 ಸಾವಿರ ರೂ. ಮೌಲ್ಯದ 410 ಕೆಜಿ ತೂಕದ ಸೇಬು ಹಣ್ಣುಗಳನ್ನು ಬಳಸಿ, 12 ಅಡಿ ಎತ್ತರ ಹಾಗೂ 2 ಅಡಿ ದಪ್ಪವಿರುವ ಹಾರವನ್ನು ಎರಡು ದಿನಗಳ ಪರಿಶ್ರಮದಲ್ಲಿ ಸಿದ್ಧಪಡಿಸಿದ್ದರು.
ಸೇಬಿನ ಹಾರವನ್ನು ಹಾಕಿ ಸನ್ಮಾನಿಸಲು ಎನ್‍ಎಸ್‍ಯುಐ ಸದಸ್ಯರು ನಗರದ ಮೋತಿ ವೃತ್ತದ ಬಳಿ ಸಚಿವರಿಗಾಗಿ ಸಂಜೆಯಿಂದ ಕಾಯುತ್ತಿದ್ದರು. ಆದರೆ ಮಳೆಯಿಂದಾಗಿ ಸಚಿವರು ಬರುವುದು ತಡವಾಯಿತು. ರಾತ್ರಿಯಾಗಿದ್ದರೂ ಅಭಿಮಾನಿಗಳಿಗೆ ನಿರಾಸೆ ಮಾಡಬಾರದೆಂದು ಮಳೆಯ ಮಧ್ಯದಲ್ಲಿಯೇ ಡಿ.ಕೆ.ಶಿವಕುಮಾರ್ ವಾಹನದ ಮೇಲೇರಿ ಸೇಬಿನ ಹಾರ ಹಾಕಿಸಿಕೊಂಡರು.
ಹಾರಕ್ಕಾಗಿ ಮುಗಿಬಿದ್ದ ಅಭಿಮಾನಿಗಳು
ಡಿಕೆ ಶಿವಕುಮಾರ್ ಮೋತಿ ವೃತ್ತದಿಂದ ಹೊರ ನಡೆಯುತ್ತಿದ್ದಂತೆ, ಸಂಜೆಯಿಂದ ಕಾಯುತ್ತಿದ್ದ ಜನರು ಹಾಗೂ ಅಭಿಮಾನಿಗಳು ಸೇಬು ಹಣ್ಣು ಕಿತ್ತುಕೊಳ್ಳಲು ಮುಗಿಬಿದ್ದರು. ‘ಸಿಕ್ಕಿದ್ದೇ ಸೀರುಂಡೆ’ ಎನ್ನುವಂತೆ ಎಷ್ಟು ಸಾಧ್ಯವೋ ಅಷ್ಟು ಸೇಬು ಹಣ್ಣುಗಳನ್ನು ತೆಗೆದುಕೊಂಡರು. ಒಂದು ಕೆಜಿಗೆ 100 ರೂ. ಕೊಡಬೇಕಾದ ಸೇಬು ಹಣ್ಣುಗಳು ಫ್ರೀ ಸಿಗುತ್ತವೆ ಅಂದರೆ ಯಾರು ಬೇಡ ಅಂತಾರೆ ಎಂಬಂತೆ ಹಾರವನ್ನು ಎಳೆದಾಡಿ, ವಾಹನದಿಂದ ಕೆಳಗೆ ಕೆಡವಿ ಸೇಬು ಹಣ್ಣು ಕಿತ್ತು ಜೇಬು, ಅಂಗಿ, ಟವೆಲ್ ನಲ್ಲಿ ತುಂಬಿಕೊಂಡು ಹೋದರು. ಸೇಬು ಪಡೆಯಲು ಯುವಕರು, ವಯಸ್ಸಾದವರು ಹಾರದ ಮೇಲೆ ಬೀಳುತ್ತಿದ್ದರು. ರಸ್ತೆಯ ಮೇಲೆ ಬಿದ್ದ ಹಣ್ಣಗಳನ್ನು ತಮ್ಮ ಕೈತುಂಬ ಹಿಡಿದು ಅಲ್ಲಿಂದ ಕಾಲ್ಕಿತ್ತರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv