ಮಡಿಕೇರಿ: ತಲಕಾವೇರಿಗೆ ಬಾಗಿನ ಅರ್ಪಿಸಿ ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ ಕೊಡಗಿನಲ್ಲಿ ತಲಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ. ಇವರ ಜೊತೆ ಡಿ.ಕೆ. ಶಿವಕುಮಾರ್ ಅವರು ಕೂಡ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, 19 ವರ್ಷದ ನಂತರ ಕರ್ನಾಟಕ ಸರ್ಕಾರ ಪೂಜೆ ಸಲ್ಲಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಧರ್ಮದಿಂದ ಭಕ್ತಿಯಿಂದ ಈ ರಾಜ್ಯವನ್ನು ಸುಭೀಕ್ಷೆಯಿಂದ ನಡೆಸುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಂತಸದಿಂದ ಹೇಳಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ನಮಗೆ ಎಲ್ಲ ನದಿಗಳ ಬಗ್ಗೆ, ನಮ್ಮ ನಾಡಿನ ಬಗ್ಗೆ, ಈ ನಾಡಿನ ಕ್ಷೇಮಕ್ಕೋಸ್ಕರ ಒಳ್ಳೆದಾಗಲಿ ಎಂದು ಇಂದು ನಮ್ಮ ಭೂಮಿ ತಾಯಿ ಕಾವೇರಿಗೆ ಮುಖ್ಯಮಂತ್ರಿಗಳು ಸರ್ಕಾರದ ಸಮೇತವಾಗಿ ಪೂಜೆ ಮಾಡಿ ಬಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿ ಪೂಜೆ ಮುಗಿದ ಮೇಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
Advertisement
ನಮ್ಮ ನಾಡಿದ ದೇವತೆ ಚಾಮುಂಡಿ ದೇವತೆಯ ಬಳಿ ಹೋಗಿ ದುಃಖವನ್ನು ಮತ್ತು ದಾರಿದ್ರ್ಯವನ್ನು ನಿವಾರಣೆ ಮಾಡುವ ಶಕ್ತಿಯನ್ನು ಆ ದೇವಿ ನಮಗೆ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ. ಇವತ್ತು ಒಂದೇ ದಿನ ಹಾರಂಗಿ, ಕಬಿನಿ ಮತ್ತು ಕೆಆರ್‍ಎಸ್ ಎಲ್ಲ ಕಡೆ ಪೂಜೆ ಮಾಡುತ್ತಿದ್ದೇವೆ. ಅವರ ಕರ್ತವ್ಯವನ್ನು ದಂಪತಿ ಸಮೇತ ನಿಮ್ಮೆಲ್ಲರ ಪರವಾಗಿ ಅವರು ಮಾಡುತ್ತಿದ್ದಾರೆ ಎಂದು ಸಿಎಂ ಬಗ್ಗೆ ಶಿವಕುಮಾರ್ ಅವರು ಹೇಳಿದ್ದಾರೆ.