ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕೆ ನಿಲ್ಲಲು ಮುಂದಾಗಿರುವ ಸುಮಲತಾ ವಿರುದ್ಧ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮಾತನಾಡಿದ ತಮ್ಮಣ್ಣ, ಅಂಬರೀಶ್ ಶಾಸಕರು, ಸಚಿವರು ಆಗಿದ್ದಾಗ ಅವರ ಮನೆಗೆ ಹೋದಾಗ ಎಷ್ಟು ಜನ ಸಾಮಾನ್ಯರನ್ನ ಈಯಮ್ಮ ಮಾತಾಡಿಸಿದ್ದಾರೆ. ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ. ನೀನು ಯಾವೂರಪ್ಪ? ಏನಪ್ಪ ನಿಮ್ಮ ಸಮಸ್ಯೆ ಅಂತ ಕೇಳಿದ್ದಾರ ಎಂದು ಪ್ರಶ್ನೆ ಮಾಡಿದ್ದಾರೆ.
ಇವತ್ತು ಅವರ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಒಬ್ಬ ಹೆಣ್ಣು ಮಗಳು ಬಂದು ಹೋದಳು, ಏನ್ ಮಾಡಿದ್ಲು ಎಂದು ರಮ್ಮಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಬೆರಗು ಆಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆ. ಸದಾ ರೈತರ ಬಗ್ಗೆ ಚಿಂತಿಸುತ್ತಾರೆ, ಯಾರು ನಮ್ಮ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆಗೆ ನಿಲ್ಲುತ್ತಾರೆ ಅಂತಹವರನ್ನು ಆಯ್ಕೆ ಮಾಡಿ ಎಂದರು.
ಬಣ್ಣದ ಮಾತಿಗೆ ಬೆರಗಾಗಿ ನಮ್ಮ ಯುವಕರು ದಾರಿ ತಪ್ಪಿದರೆ, ನಮ್ಮ ಸರ್ವನಾಶಕ್ಕೆ ನಾವೇ ಕಾರಣರಾಗುತ್ತೇವೆ. ಯಾಕೆಂದರೆ ಮತದಾರರು ತಮ್ಮ ಕ್ಷೇತ್ರದ ಹಣೆ ಬರಹವನ್ನು ಬರೆಯುವಂತರು ನೀವು. ರೈತರ ಮಗನಾದ ನಿಖಿಲ್‍ರನ್ನು ಈ ಬಾರಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರಿಗೆ ಸಚಿವ ತಮ್ಮಣ್ಣ ಮನವಿ ಮಾಡಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv