– ಕ್ಯಾಸಿನೋ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ
ಬೆಂಗಳೂರು: ವಿವಾದದ ಬಳಿ ರಾಜ್ಯದಲ್ಲಿ ಕ್ಯಾಸಿನೋ ಆರಂಭದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ವಿಪಕ್ಷಗಳು, ಜನರಿಂದ ವಿರೋಧ ಬಂದ ಬಳಿಕ ದಿಢೀರ್ ಉಲ್ಟಾ ಹೊಡೆದಿರುವ ಸರ್ಕಾರ, ಕ್ಯಾಸಿನೋ ಪ್ರಸ್ತಾಪವನ್ನು ಕೈಬಿಟ್ಟಿದೆ. ಯಾವುದೇ ಕಾರಣಕ್ಕೂ ಕ್ಯಾಸಿನೋಗೆ ನಮ್ಮ ರಾಜ್ಯದಲ್ಲಿ ಅನುಮತಿ ಕೊಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿಟಿ ರವಿ, ಕರ್ನಾಟಕದಲ್ಲಿ ಕ್ಯಾಸಿನೋ ಆರಂಭಿಸುವುದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಎಫ್‍ಕೆಸಿಸಿಐ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂತು. ಅಕ್ಕಪಕ್ಕದ ರಾಜ್ಯಗಳು ಮತ್ತು ಕೆಲ ದೇಶಗಳ ಕ್ಯಾಸಿನೋ ಸಂಸ್ಕೃತಿ ಬಗ್ಗೆ ಚರ್ಚೆ ಆಗಿತ್ತು. ಆದರೆ ನಾನು ಇದಕ್ಕೆ ಒಪ್ಪಿಲ್ಲ ಅಂತ ಸಚಿವರು ತಿಳಿಸಿದರು.
ಕ್ಯಾಸಿನೋ ನಮ್ಮ ರಾಜ್ಯದ ಸಂಸ್ಕೃತಿಗೆ ಸರಿ ಹೋಗುವುದಿಲ್ಲ. ಹೀಗಾಗಿ ಅದನ್ನು ನಾನು ನಿರಾಕರಿಸಿದೆ. ಅವತ್ತಿನ ಸಭೆಯಲ್ಲಿನ ಅರ್ಧ ಮಾಹಿತಿ ಮಾತ್ರ ಮಾಧ್ಯಮಗಳಲ್ಲಿ ಬಂದಿದೆ. ನಾನು ಅವತ್ತೇ ಕ್ಯಾಸಿನೋ ಜಾರಿಗೆ ತರೊಲ್ಲ ಅಂತ ಹೇಳಿದ್ದೆ. ಕೆಲವರು ಸುಮ್ಮನೆ ಅಪ ಪ್ರಚಾರ ಮಾಡಿದ್ದಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಬರಲು ಕೆಲ ಜೂಜುಕೋರರ ಬೆಂಬಲವೇ ಕಾರಣ. ಅವರನ್ನ ಸಮಾಧಾನ ಮಾಡಲು ಕ್ಯಾಸಿನೋ ಜಾರಿಗೆ ತರಲು ಸರ್ಕಾರ ಮುಂದಾಯಿತು ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ವಿರೋಧ ಮಾಡಿದ್ದಾರೋ ಅವರೇ ನಮಗೆ ಬೆಂಬಲ ಕೊಟ್ಟಿದ್ದಾರೆ. ಹೆಸರು ಹೇಳಿದರೆ ಅವರಿಗೆ ಅವಮಾನ ಆಗುತ್ತೆ. ಅದಕ್ಕೆ ನಾನು ಹೆಸರು ಹೇಳುವುದಿಲ್ಲ ಎಂದು ವಿರೋಧ ಮಾಡುವವರಿಗೆ ತಿರುಗೇಟು ಕೊಟ್ಟರು.