ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ನಡೆಸಿದ ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು. ಅಲ್ಲದೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ಗಲಭೆಕೋರರು ಪುಂಡಾಟ ನಡೆಸಿದ್ದಾರೆ. ಹೀಗಾಗಿ ಅವರ ಮೇಲೆ ಯಾವುದೇ ರೀತಿಯ ಕನಿಕರ ತೋರಿಸುವ ಅಗತ್ಯ ಇಲ್ಲ. ಬದಲಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೆ ಸಾದಿಕ್ ಪಾಳ್ಯದಲ್ಲೂ ಇಂತಹ ಘಟನೆ ನಡೆದಿತ್ತು. ಪಾದರಾಯನಪುರದ ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು. ಈ ಮೂಲಕ ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು. ಇಷ್ಟು ಮಾತ್ರವಲ್ಲದೆ ದುಷ್ಕರ್ಮಿಗಳಿಗೆ ಪ್ರಚೋದನೆ ಕೊಟ್ಟವರ ವಿರುದ್ಧವೂ ಕಠಿಣ ಕ್ರಮ ತಗೋಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.
ಯಾಕೆ ಒಂದೇ ಸಮುದಾಯದ ಜನ ಹೀಗಾಡ್ತಾರೆ?, ಇವರ ಹಿಂದೆ ಯಾರ ಪ್ರಚೋದನೆ ಇದೆಯಾ ಎಂಬ ಸಂಶಯಗಳು ಕಾಡುತ್ತವೆ. ಶೇ.30 ರಷ್ಟು ಸೋಂಕು ದೇಶದಲ್ಲಿ ತಬ್ಲಿಘಿಗಳಿಂದಲೇ ಅಂಟಿದೆ. ರಾಜ್ಯದಲ್ಲೂ ತಬ್ಲಿಘಿ ಮತ್ತು ನಂಜನಗೂಡು ವ್ಯಕ್ತಿಯಿಂದಲೇ ಸೋಂಕು ಹೆಚ್ಚಾಯ್ತು ಎಂದು ಆರೋಪಿಸಿದರು.
ಗಲಭೆಕೋರರ ವಿರುದ್ಧ ಕ್ರಮಕ್ಕೆ ಉತ್ತರಪ್ರದೇಶ ಮಾದರಿ ಅನುಸರಿಸಬೇಕು. ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ತಗೋಬೇಕು. ಕೇಂದ್ರೀಯ ಪಡೆಯನ್ನಾದರೂ ಕರೆಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗಲಭೆ ಹಿಂದೆ ಯಾರೇ ಇದ್ರೂ ಅವರ ವಿರುದ್ಧ ಕ್ರಮ ಆಗಬೇಕು. ಪ್ರಕರಣದ ಹಿಂದೆ ಜಮೀರ್ ಅಹಮದ್ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ನಮ್ಮನ್ನು ನಿರ್ವೀರ್ಯರು ಎಂದು ಬೇರೆಯವರು ಹೇಳುವ ಮೊದಲೇ ನಾವು ಇದನ್ನೆಲ್ಲಾ ಮಟ್ಟಹಾಕಿ ಸಾಧಿಸಿ ತೋರಿಸಬೇಕಿದೆ. ಪ್ರತಿ ದಿನ ರಾಜ್ಯದಲ್ಲಿ ಲಾಕ್ ಡೌನ್ ನಿಂದ 1,500-1,700 ಕೋಟಿ ನಷ್ಟವಾಗುತ್ತಿದೆ. ಸಿಎಂ ಸಂಯಮದಿಂದ ವರ್ತಿಸುತ್ತಿರುವುದು ದೌರ್ಬಲ್ಯ ಎಂದು ಭಾವಿಸಿದಂತಿದೆ. ಇದಕ್ಕೆಲ್ಲ ಯಾವುದರ ಮೂಲಕ ಉತ್ತರ ನೀಡಬೇಕೋ ಹಾಗೆ ನೀಡಬೇಕು. ಉತ್ತರಪ್ರದೇಶಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಂಡರೂ ತೊಂದರೆ ಇಲ್ಲ. ಸಿಎಂ ಉದಾರತೆಯನ್ನು, ಸಂಯಮದ ಮಾತನ್ನು ಪುಂಡಾಟಕ್ಕೆ ಕೊಟ್ಟ ಲೈಸೆನ್ಸ್ ಎಂದು ಭಾವಿಸಿದ್ದಾರೆ. ಇಂತಹವರಿಗೆ ಸಂಯಮ ತೋರುವ ಅಗತ್ಯವಿಲ್ಲ. ರಾಜ್ಯದ ಪೊಲೀಸರಿಗೆ ಸಾಮಥ್ರ್ಯ ಇದೆ. ಇಲ್ಲದೇ ಇದ್ದಲ್ಲಿ ಸಿಆರ್‍ಪಿಎಫ್ ಕರೆಸಿಯೇ ಪರಿಸ್ಥಿರಿ ತಿಳಿಗೊಳಿಸಲಿ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧವೇ ಸಿ.ಟಿ ರವಿ ಅಸಮಾಧಾನ ಹೊರಹಾಕಿದರು.