ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಇಡಿ ನೋಟಿಸ್ ನೀಡಿದ್ದಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ಉತ್ತರಿಸಿದ್ದು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದೆ ಎಂದು ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದ್ದು, ಡಿಕೆಶಿ ಜೊತೆ ವ್ಯವಹಾರಿಕ ನಂಟು ಹೊಂದಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ಇಡಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.
Advertisement
Advertisement
ನೆರೆ ಪರಿಹಾರದ ಕುರಿತು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುವ ಬದಲು ಹತ್ತು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ, ಧನಾತ್ಮಕವಾಗಿ ಪ್ರತಿಕ್ರಿಯಿಸಲಿ. ಈಗಾಗಲೇ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ನಮ್ಮ ಅಧಿಕಾರಿಗಳೂ ದೆಹಲಿಗೆ ಹೋಗಿದ್ದಾರೆ. ಶೀಘ್ರದಲ್ಲೇ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.
Advertisement
ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿಯ ವಿಷಯದಲ್ಲಿ ಎಂದೂ ರಾಜಕೀಯ, ಪಕ್ಷಪಾತ ಮಾಡುವುದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ 3,600ರೂ. ಗಳ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ತಲಾ 10,000ರೂ. ವಿತರಿಸಿದ್ದೇವೆ. ಮನೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ತಲಾ ಒಂದು ಲಕ್ಷ ವಿತರಿಸಲಾಗುತ್ತಿದೆ. ಉಳಿದ ನಾಲ್ಕು ಲಕ್ಷ ಸಹ ಬಿಡುಗಡೆ ಆಗುತ್ತದೆ ಎಂದು ಭರವಸೆ ನೀಡಿದರು.
Advertisement
ಅಲ್ಲದೆ ಇತ್ತೀಚೆಗೆ ಜಯಂತಿಗಳು ಜಾತಿ ಜಯಂತಿಗಳಾಗಿ ಪರಿವರ್ತನೆಯಾಗುತ್ತಿವೆ. ದಿನಕ್ಕೊಬ್ಬ ಸಂತರು, ಪ್ರಮುಖರ ಜಯಂತಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಸದ್ಯದಲ್ಲೇ ಸಮಾಜದ ಪ್ರಮುಖರ ಸಭೆ ಕರೆದು ಜಯಂತಿಗಳ ಆಚರಣೆಯ ಕುರಿತು ಮರು ಚಿಂತನೆ ನಡೆಸಲಾಗುವುದು. ಜಯಂತಿಗಳಿಗೆ ಹೊಸ ರೂಪ ಕೊಡಲಾಗುವುದು ಎಂದರು.