ಹುಬ್ಬಳ್ಳಿ: ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಧಾರವಾಡದ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆಯಿತು.
ಗ್ರಾಮದ ಬಳಿ ಇರುವ ಸಚಿವರ ಜಮೀನಿನಲ್ಲಿ ತಂದೆ ತಾಯಿ ಸಮಾಧಿಯ ಪಕ್ಕದಲ್ಲೇ ಶಿವಳ್ಳಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ಇದಕ್ಕೂ ಮುನ್ನ ಸಚಿವರ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಚಿವರ ದಿಢೀರ್ ನಿಧನದಿಂದಾಗಿ ಶಿವಳ್ಳಿ ಹುಟ್ಟೂರಲ್ಲಿ ನೀರವ ಮೌನ ಆವರಿಸಿತ್ತು.
Advertisement
Advertisement
ಜನಸಾಗರ: ಶಿವಳ್ಳಿ ಅವರ ನಿಧನ ಸುದ್ದಿ ಕೇಳಿ ಅಘಾತಗೊಂಡಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ನೂಕುನುಗ್ಗಲು ಸಂಭವಿಸಿತ್ತು. ಈ ವೇಳೆ ಜನರು ಸಚಿವರ ಸರಳ ವ್ಯಕ್ತಿತ್ವವನ್ನು ನೆನೆದು ಕೊಂಡಾಡಿದರು.
Advertisement
ಇತ್ತ ಶಿವಳ್ಳಿ ಅವರ ಕುಟುಂಬ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಲ್ಲು ನೀರು ತರಿಸಿತ್ತು. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು, ಶಾಸಕರು, ಬಿಜೆಪಿ ಪಕ್ಷ ನಾಯಕರು ಕೂಡ ಶಿವಳ್ಳಿ ಅವರ ಅಂತಿಮ ದರ್ಶನ ಪಡೆದರು. ಸಂಪುಟದ ಗೆಳೆಯನನ್ನು ಕಳೆದುಕೊಂಡ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ನನಗೆ ಏನು ಹೇಳುವ ಶಕ್ತಿ ಇಲ್ಲ ಎಂದು ಅಗಲಿದ ಮಿತ್ರನನನ್ನು ಕಂಡು ಗಳಗಳನೆ ಕಣ್ಣೀರಿಟ್ಟರು.
Advertisement
ಇತ್ತ ಶಿವಳ್ಳಿ ಅವರ ಪುತ್ರಿ, ಹುಬ್ಬಳಿಯ ಕೆಎಲ್‍ಇ ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ ರೂಪ ಶಿವಳ್ಳಿ ಇಂದು ನಗರದ ಚೇತನಾ ಕಾಲೊನಿಯಲ್ಲಿರುವ ಸೇಂಟ್ ಅಂಟೋನಿ ಶಾಲೆಯಲ್ಲಿ ತಂದೆಯ ಸಾವಿನ ದುಃಖದ ನಡುವೆಯೂ ಕಣ್ಣೀರು ಹಾಕುತ್ತಲೇ ಪರೀಕ್ಷೆ ಬರೆದರು.