ಧಾರವಾಡ: ಮಹದಾಯಿ ವಿಚಾರವಾಗಿ ಬೆಂಗಳೂರಿನಲ್ಲಿ ರೈತರು ಹೋರಾಟ ಮಾಡುತ್ತಿರುವ ವಿಚಾರವಾಗಿ ಮಾತನಾಡಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ನಿರಾಕರಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಸಚಿವ ಸಿ.ಸಿ. ಪಾಟೀಲ್ ಪಲಾಯನಗೈದಿದ್ದಾರೆ. ತಾವೇ ಪ್ರತಿನಿಧಿಸುವ ನರಗುಂದ ಕ್ಷೇತ್ರದ ರೈತರು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿದ್ದರೂ ನೊ ಕಮೆಂಟ್ ಎಂದಿದ್ದಾರೆ. ಕಳಸಾ-ಬಂಡೂರಿಗೆ ಈಗ ಯಾರೂ ಹೋರಾಟ ಮಾಡುತ್ತಿದ್ದಾರೋ, ಅವರಿಗಿಂತ ಮೊದಲೇ ಹೋರಾಟ ಮಾಡಿದವನು ನಾನು ಎಂದಷ್ಟೇ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಣ್ಯಪುರುಷ, ಸಾವರ್ಕರ್ ಬಗ್ಗೆ ಸ್ವಲ್ಪ ಅಧ್ಯಯನ ಮಾಡುವುದು ಒಳಿತು. ಅವರು ಕೇವಲ ಸ್ವತಂತ್ರ್ಯ ಪ್ರೇಮಿಗಳನ್ನು ಹೀಯಾಳಿಸುವುದು ರೂಢಿ ಮಾಡಿಕೊಂಡಿದ್ದಾರೆ. ಕರಿನೀರ ಕಾಳಾಪಾನಿ ಶಿಕ್ಷೆ(ಸೆಲ್ಯೂಲಾರ್ ಜೈಲು) ಏನು ಎನ್ನುವುದನ್ನು ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯ ನೋಡಿಕೊಂಡು ಬರಲಿ. ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಹೇಳಿದರು.
ಇನ್ನು ನಾಗಮಂಗಲ ಶಾಸಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿ ಸಿ ಪಾಟೀಲ, ಅವರು ಜ್ಯೋತಿಷ್ಯ ಹೇಳ್ತಾರೇನು, ಬಿಜೆಪಿ ಗೆಲ್ಲೋದಿಲ್ಲ ಅನ್ನೋದು ಹೇಳೋಕೆ ಅವರು ಜ್ಯೋತಿಷಿ ಅಲ್ಲ ಎಂದರು. ಇನ್ನು ಬಿಜೆಪಿ ಉಪಚುನಾವಣೆಯಲ್ಲಿ ಎಲ್ಲ ಕಡೆ ಗೆಲ್ಲುತ್ತೆ ಎಂದ ಅವರು, ನಾವಾಗಿಯೇ ಯಾರನ್ನೂ ಪಕ್ಷಕ್ಕೆ ಸೆಳೆಯುತ್ತಿಲ್ಲ, ಬಿಜೆಪಿ ತತ್ವ ಸಿದ್ಧಾಂತ ನಂಬಿಕೊಂಡು ಬರುವವರಿಗೆ ಸದಾ ಪಕ್ಷಕ್ಕೆ ಸ್ವಾಗತ ಇದೆ ಎಂದರು.