– ಅರಣ್ಯ ಸಚಿವ ಸಿಸಿ ಪಾಟೀಲ್ ಭರವಸೆ
ಬೆಂಗಳೂರು: ಅರಣ್ಯ ಇಲಾಖೆಗೆ ಮುಖ್ಯಮಂತ್ರಿ ಪದಕ ಪಡೆಯುವ ಕಾಲ ಕೂಡಿ ಬಂದಂತಿದೆ. ವಿತರಣೆಯಾಗದೇ ಇರುವ ಮುಖ್ಯಮಂತ್ರಿ ಪದಕವನ್ನು ಕೊಡಿಸುವುದಾಗಿ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.
ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಲ್ಲೂ ವಿಶೇಷ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿ ಹೆಸರಿನಲ್ಲಿ ಪದಕ ನೀಡಲು ಇಲಾಖೆ ಮುಂದಾಗಿತ್ತು. 2017ರಲ್ಲಿ ಅರಣ್ಯ ಇಲಾಖೆ ವಿಶೇಷ ಸೇವೆ ಸಲ್ಲಿಸಿದವರ ಹೆಸರು ಸಿದ್ಧಪಡಿಸಿತ್ತು. ಆದರೆ ಈವರೆಗೂ ಒಂದು ಬಾರಿಯೂ ಪದಕ ವಿತರಣೆ ಆಗಿಲ್ಲ. ಘೋಷಣೆಗೆ ಅಷ್ಟೇ ಮುಖ್ಯಮಂತ್ರಿ ಪದಕ ಸೀಮಿತವಾಗಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸ್ತಾ ಇದ್ದರು. ಈಗ ಸಚಿವರ ಭರವಸೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದ್ದಾರೆ.
Advertisement
Advertisement
ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಮಾರಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಉಳಿಸಲು ಅವಿರತ ಶ್ರಮಿಸುತ್ತಿರುವವರಿಗೆ ಕಾನೂನು ಮೂಲಕ ಎಲ್ಲಾ ರೀತಿಯ ರಕ್ಷಣೆ ನೀಡಲಾಗುವುದು. ಅರಣ್ಯ ಇಲಾಖೆಯಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ಹಿರಿಯರಿಗೆ ಸಲ್ಲುತ್ತದೆ. ಅದರ ಹಿಂದೆ ನಿಜವಾಗಿ ಕೆಲಸ ಮಾಡುವುದು ಕೆಳ ಹಂತದ ಸಿಬ್ಬಂದಿ. ಪ್ರಾಣದ ಹಂಗು ತೊರೆದು ಕಾಡನ್ನು ಕಾಪಾಡುತ್ತಾರೆ. ಇಂಥವರನ್ನು ಗುರುತಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
Advertisement
ಚಾಮರಾಜನಗರದಲ್ಲಿ ನರಭಕ್ಷಕ ಹಲಿ ಸೆರೆ ಸಿಕ್ಕಾಗ ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿತ್ತು. ಆದರೆ ನಾನೇನೂ ಮಾಡಿರಲಿಲ್ಲ. ಆ ಸಾಧನೆ ಸಲ್ಲಬೇಕಿದ್ದದ್ದು ಕೆಳ ಹಂತದ ಸಿಬ್ಬಂದಿಗೆ ಎಂದು ಸಚಿವರು ಹೇಳಿದರು. ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡುವ ಕುರಿತು ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ಶೀಘ್ರದಲ್ಲೇ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.