ಚಿಕ್ಕೋಡಿ(ಬೆಳಗಾವಿ): ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಹೆಸರು ಥಳುಕು ಹಾಕಿಕೊಂಡಿದ್ದು, ಈ ಸಂಬಂಧ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳಲು ಹೋಗಿ ಸಚಿವ ಬಿ.ಸಿ ನಾಗೇಶ್ ಎಡವಟ್ಟು ಮಾಡಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡುತ್ತಾ, ಅಕಸ್ಮಾತ್ ಕಮಿಷನ್ ಕೇಳಿದ್ರಿ ಅಂದ್ರೆ ಯಾವಾಗ್ ಕೇಳ್ತಿರಿ, ವರ್ಕ್ ಆರ್ಡರ್ ಆದ ಮೇಲೆಯೇ ತಾನೇ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ವರ್ಕ್ ಆರ್ಡರೇ ಇಲ್ಲದವನು ಕಮಿಷನ್ ಏನ್ ಕೇಳ್ತಾನ್ರಿ ಎಂದು ಮಾಧ್ಯಮದವರನ್ನೇ ಮರುಪ್ರಶ್ನೆ ಮಾಡಿದರು.
ನಿನ್ನೆ ಈಶ್ವರಪ್ಪನವರು ಯಾವುದೇ ವರ್ಕ್ ಆರ್ಡರ್ ನೀಡಿಲ್ಲ ಅಂತ ಹೇಳಿದ್ದರು. ಪ್ರೆಸ್‍ಮೀಟ್ ಮಾಡಿದ್ರೆ 40% ತೆಗೆದುಕೊಳ್ಳುವ ರೂಢಿ ನಿಮಗಿರಬೇಕು ಎಂದು ಮಾಧ್ಯಮದವರ ಮೇಲೆ ಸಚಿವರು ಹರಿಹಾಯ್ದರು. ಇದನ್ನೂ ಓದಿ: ನಕಲಿ ಡೆತ್ ನೋಟ್ ಇಟ್ಕೊಂಡು ಗೊಡ್ಡು ಬೆದರಿಕೆ ಹಾಕಿದ್ರೆ ಹೆದರಲ್ಲ: ಈಶ್ವರಪ್ಪ
ಹೆಣ ಇಟ್ಟು ರಾಜಕೀಯ ಮಾಡುವ ಸಂಸ್ಕೃತಿಗೆ ಕಾಂಗ್ರೆಸ್ ಬಂದಿದೆ. ಕೆ.ಎಸ್ ಈಶ್ವರಪ್ಪ ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಾವಲ್ಲೂ ರಾಜಕೀಯ ಮಾಡುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಚಂದ್ರು ಕೊಲೆ ಪ್ರಕರಣದಲ್ಲಿ, ಹಿಜಾಬ್ ಸಂದರ್ಭದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ಕಾಂಗ್ರೆಸ್‍ಗೆ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟರೆ ಬೇರೆ ಏನೂ ಕಾಣಿಸುತ್ತಿಲ್ಲ. ನಿಷ್ಪಕ್ಷಪಾತವಾದ ತನಿಖೆಗೆ ಸಿಎಂ ಆದೇಶಿಸಿದ್ದಾರೆ ಎಂದರು.
ಸಾವು ಸಾವೇ ಆ ಬಗ್ಗೆ ನನಗೆ ದುಃಖ ಇದೆ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಹೆಂಡತಿ ಮಕ್ಕಳ ಪರಿಸ್ಥಿತಿ ಬಗ್ಗೆ ನನಗೆ ದುಃಖವಿದೆ. ಈ ಆರೋಪದ ಬಗ್ಗೆ ತನಿಖೆಯಾಗದೆ ಸ್ಪಷ್ಟನೆ ಬರಲ್ಲ. ಬಿಜೆಪಿ ಸಂಘಟನೆ ತುಂಬಾ ದೊಡ್ಡದಿದೆ. ಬಿಜೆಪಿಗೆ ನೈತಿಕತೆ ಹೇಳುವ ಸ್ಥಿತಿ ಯಾವುದೇ ರಾಜಕಿಯ ಪಕ್ಷಗಳಿಗಿಲ್ಲ. ನಮ್ಮ ಸರಿ ಸಮಾನವಾದ ಪಕ್ಷ ಯಾವುದೂ ಇಲ್ಲ. ನಮಗೆ ನೈತಿಕ ಪಾಠ ನಮ್ಮ ಹಿರಿಯರು ನಮಗೆ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಈಶ್ವರಪ್ಪ
ಪ್ರಾಮಾಣಿಕವಾಗಿ ತನಿಖೆ ಮಾಡಲು ಸಿಎಂ ಹೇಳಿದ್ದಾರೆ. ಹಾಗಂತ ಚೀಟಿ ಬರೆದಿಟ್ಟರೆ ಎಲ್ಲರನ್ನೂ ಅರೆಸ್ಟ್ ಮಾಡಲು ಆಗುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಹಿನ್ನೆಲೆ ತನಿಖೆಯಲ್ಲಿ ಎಲ್ಲ ಗೊತ್ತಾಗಬೇಕಿದೆ. ಅವನು ಉಡುಪಿಗೆ ಏಕೆ ಹೋದ, ಅವನ ಗೆಳೆಯರು ಎಲ್ಲಿ ಹೋದರು ಈ ಬಗ್ಗೆ ತನಿಖೆ ಆಗುವವರೆಗೆ ತಡೆದುಕೊಳ್ಳಿ ಎಂದು ಸಚಿವರು ಗರಂ ಆದರು.