ಕಾರವಾರ: ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ ವ್ಯಕ್ತಿಗಳ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.
ಸಚಿವರ ಫೋಟೋದೊಂದಿಗೆ ಕೆಂಪೇ ಗೌಡ ಅವರ ವಿರುದ್ಧ ವಿವಾದಿತ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರ್ಕೆಟ್ ಠಾಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಆಕ್ಷೇಪಾರ್ಹ ಸಂದೇಶಗಳನ್ನು ಹರಿಯಬಿಟ್ಟಿರುವುದು ಸಮಾಜದಲ್ಲಿ ಗೊಂದಲ ನಿರ್ಮಿಸಿ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡ ಭಾವನೆಯನ್ನು ಕೆರಳಿಸಿ, ಜಾತಿ ಗಲಭೆಗಳನ್ನು ಸೃಷ್ಟಿಸಲು ಪಿತೂರಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೇ ಅನಂತ್ ಕುಮಾರ್ ಹೆಗ್ಡೆಯವರ ಹೆಸರನ್ನು ತೇಜೋವಧೆ ಮಾಡುವ ಉದ್ದೇಶದಿಂದಲೇ ಸಂದೆಶಗಳನ್ನು ಹಾಕಿರುತ್ತಾರೆ. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಯುಆರ್ ಎಲ್ ಲಿಂಕ್ ಗಳನ್ನು ನೀಡಿ ಮನವಿ ಮಾಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ನಲ್ಲೇನಿದೆ?
`ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕೆಂಪೇಗೌಡರ ಪ್ರತಿಮೆ ಉರುಳಿಸ್ತೇವೆ. ಅಲ್ಲದೇ ಕೆಂಪೇಗೌಡರ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ’ ಅಂತ ಸಚಿವರ ಫೋಟೋದೊಂದಿಗೆ ಈ ಹೇಳಿಕೆಯನ್ನು ಬರೆಯಲಾಗಿದೆ.
ಪ್ರಜಾಕೀಯ ಸಪೋರ್ಟರ್ಸ್ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಚಿವ ಅನಂತ್ ಕುಮಾರ್ ಹೆಗಡೆ ಈ ಹೇಳಿಕೆ ನೀಡಿದ್ದಾರೆ ಎಂದು ಎಂದು ಜನ ಭಾವಿಸಿ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.