ಕಾರವಾರ: ಪ್ರಸ್ತುತ ರಾಜಕೀಯ ಸನ್ನಿವೇಷದಲ್ಲಿ ನನ್ನ ಪಾತ್ರದ ಬಗ್ಗೆ ಅನೇಕರು ಟೀಕೆ ಮಾಡಬಹುದು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ. ನನ್ನ ಆತ್ಮ ಸಾಕ್ಷಿಗನುಸಾರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಇಂದು ಯಲ್ಲಾಪುರಕ್ಕೆ ಭೇಟಿ ನೀಡಿದ ಸಚಿವ ಆನಂದ್ ಸಿಂಗ್, ನಾನು ದೆಹಲಿಗೆ ಭೇಟಿ ನೀಡುವುದಿಲ್ಲ. ಕೇಂದ್ರ ನಾಯಕರ ಮೇಲೆ ಅಸಮಧಾನ ಪಟ್ಟುಕೊಳ್ಳಲು ನಾನು ಅಷ್ಟು ದೊಡ್ಡವನಲ್ಲ. ನಾನು ಉಪಯೋಗಿಸುವ ಸರ್ಕಾರಿ ವಾಹನವನ್ನು ಸರ್ವಿಸಿಂಗ್ ಗೆ ಬಿಟ್ಟಿದ್ದೇನೆ. ಹೀಗಾಗಿ ಬಳಸುತಿಲ್ಲ ಎಂದರು.
ಶಿರಸಿಯಲ್ಲಿ ವಿಧಾನಸಭೆ ಅಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲು ಬಂದಿದ್ದೇನೆ ಎನ್ನುವುದು ಊಹಾಪೋಹದ ಸಂಗತಿ. ವಾಪಸ್ ಇಲ್ಲಿಂದಲೇ ಹೊಸಪೇಟೆಗೆ ತೆರಳುತ್ತಿದ್ದೇನೆ. ಬೇಕಾದರೆ ನನ್ನನ್ನು ಹಿಂಬಾಲಿಸಿ ಖಚಿತಪಡಿಸಿಕೊಳ್ಳಬಹುದು ಎಂದರು. 1.50 ಕೋಟಿ ರೂ. ವೆಚ್ಚದಲ್ಲಿ ರಥ ತಯಾರಿ ಮಾಡ್ತಿದ್ದೀರಿ, ಒಮ್ಮೆ ಹೋಗಿ ವೀಕ್ಷಣೆ ಮಾಡಿ ಎಂದು ಬಹಳ ದಿನದಿಂದ ಮಠಾಧೀಶರು ಹೇಳುತ್ತಿದ್ದರು. ಯಾವ ಹಂತಕ್ಕೆ ಬಂದಿದೆ ಎಂದು ವೀಕ್ಷಣೆ ಮಾಡಲು ಇಂದು ಬಂದಿದ್ದೇನೆ. ಯಾವುದೇ ರಾಜಕೀಯ ಮಾತನಾಡಲಾರೆ ಎಂದು ಹೇಳಿದರು. ಇದನ್ನೂ ಓದಿ: ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್