ಕೊಪ್ಪಳ: ಕಾಂಗ್ರೆಸ್ಸಿನ ಕೆಲವು ನಾಯಕರು ಕುರಿ ಕಾಯೋಕೆ ತೋಳ ಬಿಟ್ಟಿದ್ದಾರೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಮ್ಮ ದಾಟಿಯಲ್ಲೆ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಗಂಗಾವತಿಯ ಭತ್ತದ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅರಣ್ಯ ಒತ್ತುವರಿ ಆರೋಪವನ್ನು ಕಾಂಗ್ರೆಸ್ ಪದೇ ಪದೇ ಮಾಡುತ್ತಿದೆ. ನನ್ನ ಮೇಲೆ ಯಾವುದೇ ನೇರವಾದ ಆರೋಪ ಇಲ್ಲ. ನನ್ನ ಸ್ವಂತ ಹೆಸರಲ್ಲಿ ಯಾವ ಕೇಸ್‍ಗಳು ಇಲ್ಲ. ನನ್ನ ಕುಟುಂಬದವರ ಹೆಸರಲ್ಲಿ ಗಣಿಗಳು ಇವೆ. ಕಾಂಗ್ರೆಸ್ಸಿನ ಕೆಲವು ನಾಯಕರು ಕುರಿ ಕಾಯೋಕೆ ತೋಳ ಬಿಟ್ಟಿದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋದಾಗಲೂ ಅದೇ ಆರೋಪ ಇತ್ತು. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಾಗಲೂ ಅದೇ ಆರೋಪ ಇದೆ. ನಾನು ಕಾಂಗ್ರೆಸ್ ಸೇರುವಾಗಲೇ ನನ್ನನ್ನ ಕಾಂಗ್ರೆಸ್ ಕರೆದುಕೊಳ್ಳಬಾರದಿತ್ತು. ನಿನ್ನ ಮೇಲೆ ಆರೋಪ ಇದೆ, ನಾನು ನಿನ್ನನ್ನು ನಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಬೇಕಿತ್ತು ಎಂದರು.
ಇವತ್ತು ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬಂದಿದ್ದಕ್ಕೆ ಅದೇ ಆರೋಪವನ್ನ ಕಾಂಗ್ರೆಸ್ ಮಾಡುತ್ತಿದೆ. ನಾನು ಯಾರನ್ನು ಕಳ್ಳ ಎಂದು ಹೇಳಲ್ಲ. ಅವರ ಆರೋಪಕ್ಕೆ ಉತ್ತರ ಕೊಡುತ್ತಿದ್ದೀನಿ ಅಷ್ಟೇ ಎಂದರು. ಇನ್ನೂ ಹಂಪಿ ವಿರುಪಾಕ್ಷೇಶ್ವರ ಆಶಿರ್ವಾದದಿಂದ ವಿಜಯನಗರ ಜಿಲ್ಲೆ ಆಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.