ಕೋಲಾರ: ಅದು ರಾಮಾಯಣ-ಮಹಾಭಾರತದ ಐತಿಹ್ಯ ಹೊಂದಿರುವ ಪುರಾತನ ಬೆಟ್ಟ. ಈ ಬೆಟ್ಟವನ್ನು ನಂಬಿ ಈಗಲೂ ಹತ್ತಾರು ಗ್ರಾಮಗಳ ಜನ-ಜಾನುವಾರುಗಳು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರದ ದುಡುಕು ನಿರ್ಧಾರ ಈಗ ಹತ್ತಾರು ಗ್ರಾಮಗಳ ಜನರನ್ನು ಆತಂಕಕ್ಕೀಡು ಮಾಡಿದೆ.
ಗ್ರಾಮಕ್ಕೆ ಹೊಂದಿಕೊಂಡಂತಿರುವ ಸುಂದರವಾದ ಬೃಹತ್ ಬೆಟ್ಟ. ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳು, ಸುತ್ತಲೂ ಸುಂದರವಾದ ವಾತಾವರಣ, ತುಂಬಿ ಹರಿಯುತ್ತಿರುವ ಕೆರೆ-ಕಲ್ಯಾಣಿಗಳು. ಇದೆಲ್ಲಾ ಕಂಡುಬರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ. ಇದನ್ನೂ ಓದಿ: ಮಸೀದಿಗೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳ ಗವಿಶ್ರೀ
Advertisement
Advertisement
Advertisement
ಇಲ್ಲಿ ಕಾಣುವ ಏಕಶಿಲಾ ಬೆಟ್ಟ ಜಿಲ್ಲೆಯ ಬೃಹತ್ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟ ಎಂಬ ಖ್ಯಾತಿ ಹೊಂದಿದ್ದು, ವೃಷಬಾದ್ರಿ ಬೆಟ್ಟ ಎಂದು ಕರೆಯಲಾಗುತ್ತದೆ. ಸೀತಾಮಾತೆ ವನವಾಸಕ್ಕೆ ಬಂದಿದ್ದಾಗ ಇಲ್ಲಿ ವಾಸವಿದ್ದಳು ಎಂಬ ಐತಿಹ್ಯ, ರಾಮಾಯಣ ಮಹಾಭಾರತದ ಕುರುಹುಗಳು ಇವೆ. ಪುರಾಣದ ಪ್ರಸಿದ್ಧ ದೇವಾಲಯಗಳು ಬೆಟ್ಟದ ತಪ್ಪಲಿನಲ್ಲಿವೆ ಜೊತೆಗೆ ಬೆಟ್ಟದ ಸುತ್ತಲೂ 30 ಗ್ರಾಮಗಳು ಹಾಗೂ ಸಾವಿರಾರು ಸಂಖ್ಯೆಯ ಪ್ರಾಣಿ ಪಕ್ಷಿಗಳು ಬೆಟ್ಟವನ್ನೇ ನಂಬಿ ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಂಡಿವೆ.
Advertisement
ಈ ಬೆಟ್ಟದ ಮೇಲೆ ಬೀಳುವ ಮಳೆ ನೀರು ಬೆಟ್ಟದ ಸುತ್ತಮುತ್ತಲಿರುವ ಕೆರೆ ಕುಂಟೆಗಳಲ್ಲಿ ನಿಲ್ಲುತ್ತದೆ. ಹೀಗಾಗಿ ಸಾವಿರಾರು ಸಂಖ್ಯೆಯ ಪ್ರಾಣಿ ಪಕ್ಷಿಗಳಿಗೆ ಹಾಗೂ ಜನರಿಗೆ ಪರೋಕ್ಷವಾಗಿ ಈ ಬೆಟ್ಟ ಆಸರೆಯಾಗಿದೆ. ಇಂತಹ ಬೆಟ್ಟದಲ್ಲಿ ರಾಜ್ಯ ಸರ್ಕಾರ ಕೃತಕ ಮರಳು ಉತ್ಪಾದನಾ ಘಟಕ ಸೇರಿದಂತೆ ಕ್ರಷರ್‌ಗಳಿಗೆ ಹಾಗೂ ಗಣಿಗಾರಿಕೆಗೆ ಅವಕಾಶ ನೀಡಿದೆ. ಸರ್ಕಾರ ಟೆಂಡರ್ ಮೂಲಕ ದೇವರಾಯ ಸಮುದ್ರದ ಸರ್ವೆ ನಂ-199 ರಲ್ಲಿ 200 ಎಕರೆಗೂ ಹೆಚ್ಚು ಪ್ರದೇಶವನ್ನು ವಿವಿದ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸೇರಿ ಎಂಟು ಇಲಾಖೆಗಳು ಇಲ್ಲಿ ಗಣಿಗಾರಿಕೆ ಮಾಡಬಹುದು ಎಂದು ಅನುಮತಿ ನೀಡಿದೆ. ಇದನ್ನೂ ಓದಿ: ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್
ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಮರಳು ಹಾಗೂ ಕಲ್ಲು ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಪ್ರಕೃತಿ ಸಂಪತ್ತು ಅವನತಿ ಹಾದಿ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಲ್ಲಿ ಹುಡಿ ಅಥವಾ ಎಂ.ಸ್ಯಾಂಡ್ ಘಟಕ ಸ್ಥಾಪನೆಗೆ ಅನುಮತಿ ನೀಡುವ ಮೂಲಕ ಈ ಗ್ರಾಮಗಳ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. ಈ ಬೆಟ್ಟದಲ್ಲಿ 9 ಎಂ.ಸ್ಯಾಂಡ್ ಘಟಕಗಳ ಸ್ಥಾಪನೆಗೆ ಸರ್ಕಾರವೇ ರಾಜ್ಯ ಮಟ್ಟದಲ್ಲಿ ಟೆಂಡರ್ ಮೂಲಕ ಅನುಮತಿ ನೀಡಿದೆ. ಇದು ಸುತ್ತಮುತ್ತಲಿನ ಹತ್ತಾರು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿ ಎಂ.ಸ್ಯಾಂಡ್ ಘಟಕ ನಿರ್ಮಾಣವಾಗಿದ್ದೇ ಆದಲ್ಲಿ ಸ್ಟೋಟಕ, ದೂಳಿನಿಂದ ಇಡೀ ಪ್ರದೇಶ ಹಾಳಾಗಿ ಸುಮಾರು 30 ಗ್ರಾಮಗಳನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದು ಗ್ರಾಮಸ್ಥರ ಆತಂಕ. ಸರ್ಕಾರದ ನಿಯಮಗಳ ಅಡಿಯಲ್ಲಿ ಗಣಿಗಾರಿಕೆ ಮಾಡಿದರೆ ಗ್ರಾಮಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವುದು ಅಧಿಕಾರಿಗಳ ಮಾತಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಹಸಿರು ಪೀಠದಿಂದ ತೀರ್ಪು ಹೊರಬೀಳಲಿದೆ. ಈ ಬಗ್ಗೆ ಮಾತನಾಡಿ ಅಕ್ರಮ ಗಣಿಗಾರಿಕೆ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸ್ಥಳೀಯ ಶಾಸಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಸಿರು ಪೀಠದ ತೀರ್ಪು ಯಾರ ಪರವಾಗಿ ಬರುತ್ತದೋ ಗೊತ್ತಿಲ್ಲ. ಆದರೆ ನಮ್ಮೂರಿನ ಪ್ರಕೃತಿ ಸಂಪತ್ತನ್ನು ಉಳಿಸಿ ಕೊಡಿ ಎನ್ನುವುದು ಗ್ರಾಮಸ್ಥರ ಅಳಲು. ನಮಗೆ ಅಭಿವೃದ್ದಿ ಹೆಸರಲ್ಲಿ ನಡೆಯುವ ಪ್ರಕೃತಿ ನಾಶಕ್ಕಿಂತ ನೆಮ್ಮದಿಯಾಗಿ ಪ್ರಕೃತಿಯ ಜೊತೆಗೆ ಬದುಕಲು ಬಿಡಿ ಎನ್ನುವುದು ಗ್ರಾಮಸ್ಥರ ಆಗ್ರಹ.