ಬೀದರ್: ಕಳೆದ ಡಿಸೆಂಬರ್ 12ರಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಸಂಬಂಧಿಯಿಂದ ಹಲ್ಲೆ ಮಾಡಿದ ಪ್ರಕರಣ ದಿನ ಉರುಳುತ್ತಿದ್ದಂತ್ತೆ ಜಾತಿ ಸ್ವರೂಪ ಪಡೆದುಕೊಳ್ಳುತ್ತಿದೆ.
ಕ್ರಷರ್ ಮಾಲೀಕ ಶರಣು ರೆಡ್ಡಿ ಮೇಲೆ ಹಲ್ಲೆ ಮಾಡಿದ್ದಕ್ಕೆ ರೆಡ್ಡಿ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದ್ದು ಕ್ರಮ ತೆಗೆದುಕೊಳ್ಳಿ ಅಂತ ರೆಡ್ಡಿ ಯುವ ಬ್ರಿಗೇಡ್ ನಿಂದ ಬೀದರ್ ಎಸ್‍ಪಿ, ಡಿಸಿಯವರಿಗೆ ನಿನ್ನೆ ಮನವಿ ನೀಡಲಾಗಿತ್ತು. ಇಂದು ಹಲ್ಲೆ ಮಾಡಿದ ಸಿದ್ದು ಪಾಟೀಲ್ ಸೇರಿದಂತೆ ನೂರಾರು ಲಿಂಗಾಯತರು ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿ ಡಿಸಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಸಿದ್ದು ಪಾಟೀಲ್ ಅವರ ಸಹೋದರ ಸಂತೋಷ್ ಪಾಟೀಲ್‍ಗೆ ಶರಣ ರೆಡ್ಡಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದನ್ನ ಪ್ರಶ್ನಿಸಲು ತೆರಳಿದಾಗ ನನ್ನ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ನಾನು ಇದಕ್ಕೆ ಪ್ರತಿರೋಧ ಒಡ್ಡಿದೆ ಅಷ್ಟೆ ಎಂದು ಸಿದ್ದು ಪಾಟೀಲ್ ಹೇಳುತ್ತಿದ್ದಾರೆ. ನೀವು ಸಿಸಿಟಿವಿಯನ್ನು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು ಅಂತ ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ ಬಳಿ ಮನವಿ ಮಾಡಿಕೊಂಡರು.
ಹಲ್ಲೆ ಪ್ರಕರಣವೀಗ ಜಾತೀಯ ತಿರುವು ಪಡೆದುಕೊಂಡಿದ್ದು, ಈ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕೂಡಲೇ ಪ್ರಕರಣವನ್ನ ಬಗೆಹರಿಸಬೇಕು. ಇಲ್ಲವಾದರೆ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಮತೀಯ ಗಲಭೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.