ಲಕ್ನೋ: ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಬುಲ್ಡೋಜರ್ ಒಂದು ಖ್ಯಾತಿ ತಂದಿದ್ದು, ಸಾಮೂಹಿಕ ವಿವಾಹ ಮಹೋತ್ಸವದ ಸಮಾರಂಭಗಳಲ್ಲಿ ಮಿನಿಯೇಚರ್ ಬುಲ್ಡೋಜರ್ಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಹುಟ್ಟಿಕೊಂಡಿದೆ.
ಚೌರಾಸಿಯಾ ಸಮುದಾಯವು ಪ್ರಯಾಗ್ರಾಜ್ನ ಕತ್ರಾದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹಮಹೋತ್ಸವ ಸಮಾರಂಭದಲ್ಲಿ, 9 ಜೋಡಿಗಳಿಗೆ ಬುಲ್ಡೋಜರ್ ಆಟಿಕೆ ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇತರ ವಿನೂತನ ಉಡುಗೊರೆಗಳನ್ನು ನೀಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಈಗ `ಬುಲ್ಡೋಜರ್ ಬಾಬಾ’ ಎಂದು ಕರೆಯಲ್ಪಡುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಧುಗಳು ಸಾಮೂಹಿಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಉಚಿತ ಊಟ ನೀಡಲು ಮುಂದಾದ ಯೋಗಿ ಸರ್ಕಾರ
ಈ ವೇಳೆ ಪ್ರಯಾಗ್ ರಾಜ್ ಮೇಯರ್ ಅಭಿಲಾಷಾ ಗುಪ್ತಾ ಮಾತನಾಡಿ, ಬುಲ್ಡೋಜರ್ ಮಹಿಳೆಯರ ಸುರಕ್ಷತೆಯ ಸಂಕೇತವಾಗಿದೆ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಬುಲ್ಡೋಜರ್ ಅನ್ನು ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲ ಅವಧಿಯಲ್ಲಿ ಮಾಫಿಯಾ ಮತ್ತು ಅಪರಾಧಿಗಳ ಅಕ್ರಮ ಆಸ್ತಿಗಳನ್ನು ಕೆಡವಲು ವ್ಯಾಪಕವಾಗಿ ಬಳಸಿದರು. ಅಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಪಡಿತರ ಯೋಜನೆ ವಿಸ್ತರಣೆ- 2ನೇ ಅವಧಿಯಲ್ಲಿ ಯೋಗಿ ಸರ್ಕಾರದ ಮೊದಲ ನಿರ್ಧಾರ
ಸ್ವಾಮಿ ಕಲ್ಯಾಣಿ ನಂದಗಿರಿ ಅಕಾ ಛೋಟಿ ಗುರು ಮಾತನಾಡಿ, ಬುಲ್ಡೋಜರ್ ಆಟಿಕೆಗಳು ಜೀವನದಲ್ಲಿ ಅನುಸರಿಸುವ ಒಳ್ಳೆಯ ಕ್ರಮವನ್ನು ಸಂಕೇತಿಸುತ್ತವೆ. ಆದ್ದರಿಂದ ನವ ಜೋಡಿಗಳಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳೊಂದಿಗೆ ಬುಲ್ಡೋಜರ್ ಆಟಿಕೆಗಳನ್ನೂ ನೀಡಿದ್ದೇವೆ. ಇದರಿಂದ ಅವರು ಶಾಂತಿ ಮತ್ತು ಸಾಮರಸ್ಯದ ಜೀವನ ನಡೆಸುತ್ತಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಇದು ಅನುಮೋದನೆಯಾಗಿದೆ ಎಂಬುದಾಗಿ ಹೇಳಿದ್ದಾರೆ.