ಈ ಮಳೆಗಾಲದಲ್ಲಿ ಬಟ್ಟೆ ಕೇವಲ ಅಂದ ಹೆಚ್ಚಿಸೋದು ಮಾತ್ರವಲ್ಲ. ಬಟ್ಟೆಗೆ ಸರಿಹೊಂದುವಂತೆ ಆಭರಣಗಳು ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ಪ್ರತಿ ಟೈಮ್‌ಗೂ ಟ್ರೆಂಡ್ ಬದಲಾಗುವಂತೆ ಈ ಮಾನ್ಸೂನ್ ಸಮಯದಲ್ಲೂ ಅಂಬ್ರೆಲ್ಲಾ ಇಯರಿಂಗ್, ಅಂಬ್ರೆಲ್ಲಾ ಪೆಂಡೆಂಟ್ ನ್ಯೂ ಫ್ಯಾಷನ್ ಮಾರುಕಟ್ಟೆಯಲ್ಲಿ ರಾರಾಚಿಸುತ್ತಿದೆ.
ಮಿನಿ ಛತ್ರಿಗಳ ಥೀಮ್ ಇರುವಂತಹ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಉಂಗುರಗಳು ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿದೆ. ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ ಇದೀಗ ಛತ್ರಿಗಳ ಹಂಗಾಮ ಹೆಚ್ಚಾಗಿದೆ. ಹೌದು, ಇದೀಗ ಎಲ್ಲಾ ಟ್ರೆಂಡ್ ಹೋಗಿ ಅಂಬ್ರೆಲ್ಲಾ ಜ್ಯುವೆಲರಿ ಟ್ರೆಂಡ್ ಶುರುವಾಗಿದೆ.
ಛತ್ರಿಗಳಿಗೂ ಫ್ಯಾಷನ್ ಜ್ಯುವೆಲರಿಗಳಿಗೂ ಏನು ಸಂಬಂಧ ಅಂತಾ ಯೋಜಿಸುತ್ತಿದ್ದೀರಾ? ಇದು ಬೇರೇನಲ್ಲ ಛತ್ರಿಗಳ ಥೀಮ್ ಇರಿಸಿಕೊಂಡಂತಹ ಫ್ಯಾಷನ್ ಜ್ಯುವೆಲರಿಗಳು ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಇದೀಗ ಹೆಣ್ಣು ಮಕ್ಕಳ ಮನ ಸೆಳೆಯುತ್ತಿದೆ.
ವೆರೈಟಿ ಡಿಸೈನ್ ಇಯರಿಂಗ್ಸ್
ಇದೀಗ ಫ್ಯಾಶನ್ ಲೋಕಕ್ಕೆ ಛತ್ರಿಯ ಚಿತ್ತಾರವಿರುವ ಹ್ಯಾಂಗಿಂಗ್ಸ್, ಕಿವಿಯೊಲೆ, ಸ್ಟಡ್ಸ್, ಉಂಗುರ, ಬ್ರೆಸ್ಲೆಟ್, ಫಿಂಗರ್‌ರಿಂಗ್‌ಗಳು ಎಂಟ್ರಿ ಕೊಟ್ಟಿದೆ. ಜ್ಯುವೆಲರಿ ಡಿಸೈನರ್‌ಗಳು ತಮ್ಮ ಕೈಚಳಕದಿಂದ ಹೆಣ್ಣು ಮಕ್ಕಳ ಮನ ಗೆಲ್ಲುವಂತಹ ಸೂಪರ್ ಸ್ಟೈಲ್‌ನ ಜ್ಯುವೆಲ್ಲರಿಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ನೋಡಲು ಡಿಫರಂಟ್ ಲುಕ್ ನೀಡುವ ಈ ಫ್ಯಾಷನ್ ಜ್ಯುವೆಲರಿಗಳು ಕ್ಲಾಸಿ ವಿಥ್ ಡಿಫರೆಂಟ್ ಕಾಣಲು ಸಹಕರಿಸುತ್ತದೆ.
ಅಂಬ್ರೆಲ್ಲಾ ವಿನ್ಯಾಸದ ಕಿವಿಯೋಲೆ
ಕಲರ್‌ಫುಲ್ ಛತ್ರಿ, ಕ್ರಿಸ್ಟಲ್ ಅಂಬ್ರೆಲ್ಲಾ ಹ್ಯಾಂಗಿಂಗ್ಸ್, ಲೈಟ್ವೇಟ್ ಮೆಟೀರಿಯಲ್‌ನಲ್ಲಿ ಮಾಡಿದ ಇಯರಿಂಗ್ಸ್, ನೀರಿನ ಹನಿಯನ್ನು ಹೋಲುವ ಅಂಬ್ರೆಲ್ಲಾ ಡಿಸೈನ್ ಇಯರಿಂಗ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇಂತಹ ಇಯರಿಂಗ್‌ಗಳು ಮಾನ್ಸೂನ್‌ನಲ್ಲಿ ಧರಿಸುವ ಬಟ್ಟೆಗಳಿಗೆ ಸಕ್ಕತ್ ಮ್ಯಾಚ್ ಆಗುತ್ತದೆ. ಅಲ್ಲದೆ ಫ್ಯಾಶನ್ ಪ್ರಿಯರಿಗೆ ಇದೊಂದು ಡಿಫ್ರೆಂಟ್ ಲುಕ್ ನೀಡುತ್ತದೆ.
ಇನ್ನು ಇದರಲ್ಲಿ ಪರ್ಲ್, ಮೆಟಲ್, ಸ್ಟೋನ್, ಕಾಟನ್, ಟೆರಾಕೋಟ್, ವುಡನ್, ಸಿಲ್ವರ್, ಗೋಲ್ಡ್ ಕವರ್ಡ್ ಡಿಸೈನ್‌ನ ನಾನಾ ಛತ್ರಿ ಚಿತ್ತಾರದ ಹ್ಯಾಂಗಿಂಗ್ಸ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಫ್ಯಾಶನ್ ಪ್ರಿಯರ ಗಮನ ಸೆಳೆಯುತ್ತಿರುವ ಇಯರಿಂಗ್‌ಗಳನ್ನು ಜ್ಯುವೆಲರಿ ಡಿಸೈನರ್ ಪರಿಚಯಿಸಿದ್ದಾರೆ.
ಅಂಬ್ರೆಲ್ಲಾ ಫಿಂಗರ್ ರಿಂಗ್
ಇನ್ನು, ವಿವಿಧ ವಿನ್ಯಾಸವಿರುವ ಉಂಗುರಗಳು ಕೂಡ ಫಂಕಿ ಜ್ಯುವೆಲರಿ ಕೆಟಗರಿಯಲ್ಲಿ ಬಿಡುಗಡೆಯಾಗಿವೆ. ಅದರಲ್ಲೂ ಬ್ಲ್ಯೂ ಹಾಗೂ ವೈಟ್ ಕ್ರಿಸ್ಟಲ್ ಸ್ಟೋನ್‌ಗಳಿಂದ ಮಾಡಿರುವ ಅಂಬ್ರೆಲ್ಲಾ ಡಿಸೈನ್‌ಗಳ ಉಂಗುರಗಳು ಹುಡುಗಿಯರನ್ನು ಹೆಚ್ಚು ಆಕರ್ಷಿಸಿದೆ.
ಮಳೆಗಾಲಕ್ಕೆ ಹೊಂದುವ ಜ್ಯುವೆಲರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವಂತಹ ಡಿಸೈನರ್‌ಗಳ ಕೈಚಳಕಕ್ಕೆ ಎಲ್ಲರೂ ಮಾರುಹೋಗಿದ್ದಾರೆ. ಸದಾ ಟ್ರೆಂಡ್‌ನಲ್ಲಿರಬೇಕು ಎಂದುಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಡಿಸೈನ್ ಆಗಿದೆ.