– ವಲಸಿಗರ ಬದುಕು ಕಸಿದ ಡೆಡ್ಲಿ ಕೊರೊನಾ
– ತಾಯಿ, ಮಗುವಿಗೆ ವಾಹನವೇ ಮನೆ
ಧಾರವಾಡ: ಕೊರೊನಾ ಲಾಕ್‍ಡೌನ್‍ನಿಂದ ಅನೇಕ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಜಿಲ್ಲೆಯಲ್ಲಿ ಎರಡು ವಾರದ ಹಸುಗೂಸು ಮತ್ತು ಬಾಣಂತಿ ಬಯಲಿನಲ್ಲೇ ಮಿನಿಗೂಡ್ಸ್ ವಾಹನದಲ್ಲಿ ವಾಸ ಮಾಡುತ್ತಿದ್ದಾರೆ.
ಲಾಕ್‍ಡೌನ್‍ಗೂ ಮುನ್ನ ಧಾರವಾಡ ಹಾಗೂ ಹಾವೇರಿ ಗಡಿ ಭಾಗದ ಹೆಳವರು ಎಂಬ ಸಮುದಾಯದ ಜನರು ಜಿಲ್ಲೆಯ ಹಳಿಯಾರ ರಸ್ತೆಯಿರುವ ಹಳ್ಳಿಗಳಲ್ಲಿ ಸಂಚಾರ ಮಾಡುತ್ತ ಬಣದೂರ ಗ್ರಾಮದ ಬಳಿ ಬಂದಿದ್ದರು. ಆದರೆ ತಮ್ಮ ತಮ್ಮ ಊರುಗಳನ್ನು ಸೇರಬೇಕು ಎನ್ನುವಾಗಲೇ ಕೊರೊನಾದ ಲಾಕ್‍ಡೌನ್ ಜಾರಿಯಾಗಿ ಇವರೆಲ್ಲ ಬಣದೂರ ಬಯಲಿನಲ್ಲೇ ಲಾಕ್ ಆದರು. ಇಲ್ಲಿಯೇ ಕೆಲ ಹೆಳವರ ಮನೆಗಳು ಸಹ ಇರುವುದರಿಂದ ಇವರೆಲ್ಲ ಇಲ್ಲಿಯೇ ಉಳಿದರು. ಇವರೊಂದಿಗೆ ತನ್ನ ತಾಯಿ ಬಸವ್ವಳ ಮನೆಗೆ ಹೆರಿಗೆಗೆ ಬಂದಿದ್ದ ಸರಸ್ವತಿ ಸಹ ಇದ್ದಳು.
ದಿನ ತುಂಬುವುದರೊಳಗಾಗಿ ಇವರೆಲ್ಲ ತಮ್ಮ ತಮ್ಮ ಊರುಗಳನ್ನು ಸೇರಿ ಹೆರಿಗೆಯೂ ಆಗೋದಿತ್ತು. ಆದರೆ ಲಾಕ್‍ಡೌನ್ ಆಗಿದ್ದರಿಂದ ಎರಡು ವಾರದ ಹಿಂದೆಯಷ್ಟೇ ಸರಸ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಲಾಗಿದೆ. ನಂತರ ತನ್ನವರೆಲ್ಲ ಬಣದೂರ ಬಯಲಿನಲ್ಲಿ ಇದ್ದ ಕಾರಣ ಬಾಣಂತಿ ಸರಸ್ವತಿ ಕೂಡ ಅಲ್ಲಿಗೆ ವಾಪಸ್ ಬಂದಿದ್ದಾರೆ.
ಮಿನಿ ಗೂಡ್ಸ್‌ನ ಹಿಂಭಾಗಕ್ಕೆ ಕೌದಿಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಮಗುವಿಗೆ ಆರೈಕೆ ಮಾಡುತ್ತಿದ್ದಾರೆ. ಆದರೆ ಒಂದಷ್ಟು ರೇಷನ್ ಮಾತ್ರ ಬಂದಿದ್ದು, ಉಳಿದಂತೆ ಕೈಯಲ್ಲಿರುವುದು ಎಲ್ಲವೂ ಖಾಲಿಯಾಗುತ್ತಿದೆ. ಹೀಗಾಗಿ ಮುಂದೇನು ಎನ್ನುವ ಚಿಂತೆ ಕೂಡ ಇವರನ್ನು ಕಾಡುತ್ತಿದೆ.
ಸರಸ್ವತಿ ಹೆರಿಗೆಗೆ ಆಸ್ಪತ್ರೆಗೆ ಕೂಡ ಬೈಕ್‍ನಲ್ಲಿ ಹೋಗಿದ್ದು, ಮೈಯಲ್ಲಿ ರಕ್ತ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಪೌಷ್ಟಿಕ ಆಹಾರ ಕೊಡೋಣ ಎಂದರೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಸಮುದಾಯದವರು ವರ್ಷಗಟ್ಟಲೆ ಹೊರಗೆ ಜೀವನ ಕಳೆಯುವುದು. ಇದೇ ರೀತಿ ವಾಹನದಲ್ಲಿ ತಮ್ಮ ಮನೆ ಮಾಡಿ ಇರುತ್ತಾರೆ. ಕೆಲವರು ಚಕ್ಕಡಿಯಲ್ಲಿ ಮನೆ ಮಾಡಿಕೊಂಡು ಇರುತ್ತಾರೆ. ಇನ್ನೂ ಕೆಲವರು ಈ ರೀತಿ ವಾಹನದಲ್ಲೇ ಕಾಲ ಕಳೆಯುತ್ತಾರೆ. ಸದ್ಯ ಸರಸ್ವತಿ ಹಾಗೂ ಅವರ ಮಗುವಿಗೆ ಈ ಲಾಕ್ ಡೌನ್‍ನಿಂದ ವಾಹನವೇ ಮನೆ ಆಗಿದೆ.