Districts

ಶಾಸಕರ ಸಮಸ್ಯೆ ಕೇಳಲು ನನ್ನ ಮನೆ ಬಾಗಿಲು ಸದಾ ತೆರೆದಿದೆ: ಹೆಚ್‌ಡಿಕೆ

Published

on

Share this

ಬಿಡದಿ: ಪಕ್ಷದಲ್ಲಿ ಬೆಳೆದು ಬಿಟ್ಟು ಹೊರಹೋಗಿ ತೆಗಳಿದರೆ ಸುಮ್ಮನಿರಲಾಗದು. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬಿಡದಿಯ ತೋಟದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೆಲ ಶಾಸಕರ ಬಹಿರಂಗ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಕ್ಷ ತೊರೆಯುವ ಬಗ್ಗೆ ಕೆಲವರು ಅನಗತ್ಯವಾಗಿ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.

ಅವರೇ ಸ್ವತಃ ಗೊಂದಲ ಸೃಷ್ಟಿಸಿಕೊಂಡು ಬಹಿರಂಗ ಹೇಳಿಕೆ ಕೊಡುವುದು ಯಾಕೆ? ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಾದ ವಿಚಾರಗಳನ್ನು ಹೊರಗೆ ಹೇಳುವುದು ಸರಿಯಲ್ಲ. ಏನೇ ಸಮಸ್ಯೆ, ಗೊಂದಲ ಇದ್ದರೂ ಬರಲಿ. ಚರ್ಚೆ ಮಾಡಲು ನಾನು ಸಿದ್ಧ ಇದ್ದೇನೆ. ಯಾರೂ ಪಕ್ಷದ ಸಂಘಟನೆಗೆ ಹೊಡೆತ ಬೀಳುವಂತೆ ನಡೆದುಕೊಳ್ಳಬಾರದು ಎಂದು ಅವರು ಹೇಳಿದರು.

ಯಾರೇ ಶಾಸಕರು ಬಂದರು ಮುಕ್ತವಾಗಿ ನಾನು ಯಾವಾಗಲೂ ಮಾತನಾಡುತ್ತೇನೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧನಿದ್ದೇನೆ. ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ಆದರೆ, ಮೂರ್ನಾಲ್ಕು ಜನ ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ಅವರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಜೆಡಿಎಸ್ ಪುಟಿದೇಳುತ್ತಿದೆ :
ಜೆಡಿಎಸ್ ಕಾರ್ಯಕರ್ತರ ಪಕ್ಷ. ಅದು ದುರ್ಬಲ ಆಗಿಲ್ಲ. ಆಗುವುದೂ ಇಲ್ಲ. ಪಕ್ಷದ ಕಾರ್ಯಗಾರಗಳು ಯಶಸ್ವಿಯಾಗಿ ನಡೆದಿವೆ. ಪಕ್ಷ ತಳಮಟ್ಟದಿಂದ ಪುಟಿದೇಳುತ್ತಿದೆ ಎಂದ ಅವರು, ಕಾಂಗ್ರೆಸ್ ನಿಂದಲೂ ಸಣ್ಣಪುಟ್ಟ ಜಾತಿಗಳ ಕಾರ್ಯಾಗಾರ ಆಯೋಜನೆ ನಡೆದಿದೆ. ಕೆಲವರು ನಮ್ಮ ಪಕ್ಷ ನಿಷ್ಕ್ರಿಯ ಆಗಿಬಿಟ್ಟಿದೆ ಎಂದುಕೊಂಡಿದ್ದಾರೆ. ಈಗ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವಂತಿದೆ.ಅದೇ ಕಾರಣಕ್ಕೆ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟರು.

ಯಾರನ್ನೂ ಪಕ್ಷ ಬಿಟ್ಟು ಹೋಗಿ ಅಂತ ನಾನು ಹೇಳಿಲ್ಲ. ಆದರೆ, ಪಕ್ಷ ತ್ಯಜಿಸಿ ಹೋದ ಮೇಲೆ ನಾನೇನು ಮಾಡಲು ಆಗುವುದಿಲ್ಲ. ಈ ಹಿಂದೆ‌ ಕೆಲವರು ಪಕ್ಷದ ಶಕ್ತಿ ಬಳಸಿಕೊಂಡು ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು.ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿಯಿತು ಎಂದು ಅವರು ಬೇಸರಗೊಂಡರು.

ನಿನ್ನೆಯೂ ಒಬ್ಬ ಶಾಸಕರು ಹೇಳುತ್ತಿದ್ರು. ನಾನಾಗಿಯೇ ಪಕ್ಷ ಬಿಟ್ಟು ಹೋಗಲ್ಲ, ನಾಯಕರೇ ಗೊಂದಲ ಸೃಷ್ಟಿ ಮಾಡ್ತಿರೋದು ಅಂದಿದ್ದಾರೆ. ನಾವ್ಯಾಕೆ ಗೊಂದಲ ಸೃಷ್ಟಿ ಮಾಡೋಣ. ಒಳಗೊಳಗೇ ಸಂಚು ರೂಪಿಸಿಕೊಂಡು ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಅಧಿಕಾರದ ರುಚಿ ಕಂಡು ನಡುನೀರಲ್ಲಿ ಕಾರ್ಯಕರ್ತರನ್ನು ಬಿಟ್ಟು ಹೋಗ್ತಾರೆ. ನಾಯಕರಿಂದ ಪಕ್ಷ ಅಲ್ಲ, ಕಾರ್ಯಕರ್ತರಿಂದ ಪಕ್ಷ. ಕೆಲವರು ಪಕ್ಷಕ್ಕೆ ಕುತ್ತಿಗೆ ಕುಯ್ದು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದರು.

ನಮ್ಮಿಂದ ಯಾವುದೇ ಶಾಸಕರಿಗೆ ಅಪಚಾರವಾಗಿಲ್ಲ. ಪಕ್ಷ‌ ಬಿಡೋರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿದೆ. ಯಾವಾಗ ಬೇಕಾದ್ರೂ ಚರ್ಚೆಗೆ ಅವಕಾಶ ಇದೆ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಮತಾಗೆ ಭರ್ಜರಿ ಜಯ – 2024ರಲ್ಲಿ ದೆಹಲಿಯಲ್ಲಿ ನಮ್ಮದೇ ಸರ್ಕಾರ ಎಂದ ಟಿಎಂಸಿ

ಕಾರ್ಯಾಗಾರ ಯಶಸ್ವಿ :
ನಾಲ್ಕು ದಿನಗಳ ಕಾರ್ಯಾಗಾರ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಅದಕ್ಕೆ ಉತ್ತರ ನೀಡಿದ್ದೇನೆ. ಈ ಬಗ್ಗೆ ಮುಸ್ಲಿಂ ಕಾರ್ಯಾಗಾರದಲ್ಲಿ ಮಾತನಾಡುತ್ತೇನೆ. ಎಲ್ಲಾ ಸಮಾಜದವರಿಗೂ ಜೆಡಿಎಸ್ ಗೌರವ ನೀಡುತ್ತಿದೆ. ಈ ಸಮಾಜಕ್ಕೆ ನಾವು ಹಲವಾರು ಕೊಡುಗೆ ನೀಡಿದ್ದೇವೆ. ಮುಂದಿನ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಅಲ್ಪಸಂಖ್ಯಾತರು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತದೆ. ವಿಜಯದಶಮಿ ಹಬ್ಬದ ನಂತರ ಜೆಪಿ ಭವನದಲ್ಲಿ ಜಿಲ್ಲಾವಾರು ಸಭೆ ಮಾಡುತ್ತೇವೆ. ಹದಿನಾರರ ನಂತರ ಎರಡನೇ ಹಂತದ ಕಾರ್ಯಾಗಾರ ಆರಂಭ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ಅವಕಾಶ ಕಲ್ಪಿಸಬೇಕು. ಅವರು ಜನರ ಹತ್ತಿರಕ್ಕೆ ಹೋಗಬೇಕು. ಅಂತವರಿಗೆ ಅವಕಾಶ ನೀಡುತ್ತೇವೆ ಎಂದು ಹೆಚ್ ಡಿಕೆ ತಿಳಿಸಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications