ದಾವಣಗೆರೆ: ಸೇನೆಯಲ್ಲಿ ನಾಯಕ್ ಸುಬೇದಾರ್ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ಮಂಜುನಾಥ್ ರೆಡ್ಡಿ ತಾನು ಸೈನಿಕ ಅಂತ ಹೇಳಿಕೊಂಡು ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಹಾವೇರಿ ಹಾಗೂ ದಾವಣಗೆರೆಯ ಯುವಕರಿಗೆ ಸೈನ್ಯದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಅವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ.
ಹರಿಹರದ ಕೆಆರ್ ನಗರದ 1 ನೇ ಕ್ರಾಸ್ ನಲ್ಲಿ ಮನೆ ಮಾಡಿಕೊಂಡಿದ್ದ ಮಂಜುನಾಥ್ ರೆಡ್ಡಿ, ಬೆಳಗಾವಿ ಸೈನಿಕ ಕ್ಯಾಂಪ್ ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ. ಸೈನಿಕರ ಕ್ಯಾಂಪ್ ನಲ್ಲಿ ಸೈನಿಕರನ್ನು ನೋಡಿ ಹಾವ ಭಾವ ಕಳಿತು ಥೇಟ್ ಸೈನಿಕರಂತೆ ವರ್ತನೆ ಮಾಡುತ್ತಿದ್ದನು. ಅದೇ ರೀತಿ ಸೈನಿಕರ ಗತ್ತು-ಗಮ್ಮತ್ತನ್ನು ಅಸ್ತ್ರ ಮಾಡಿಕೊಂಡ ಮಂಜುನಾಥ್ ರೆಡ್ಡಿ ಜನರನ್ನ ನಂಬಿಸಿದ್ದನು.
ಯೋಧರಿಗೆ ನಮನ ಕಾರ್ಯಕ್ರಮದ ಮೂಲಕ ಜನರ ಮನಸ್ಸು ಗೆದ್ದಿದ್ದ ಈತ ಸರ್ಕಾರಿ ಶಾಲೆಗಳಿಗೆ ವಿವಿಧ ಅನುದಾನ ಬಳಸಿ ಶಾಲಾ ಕೊಠಡಿ, ಯೋಧರ ಕಂಚಿನ ಪ್ರತಿಮೆ, ಮೃತ ಯೋಧರ ಮನೆಗೆ ಬೋರ್‍ವೆಲ್ ಕೊರೆಸಿಕೊಟ್ಟು ಜನರಲ್ಲಿ ನಂಬಿಕೆಗಳಿಸಿದ್ದ.
ಈತನ ಮಾತನ್ನು ಕೇಳಿ ಹಾವೇರಿ ಜಿಲ್ಲೆ ಸವಣೂರು, ದಾವಣಗೆರೆ ಜಿಲ್ಲೆಯ ಸಿಂಗ್ರಿಹಳ್ಳಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಯುವಕರು ಹಣ ನೀಡಿದ್ದರು. ಜನರನ್ನು ಅಷ್ಟೇ ಅಲ್ಲ ಸ್ವತಃ ತನ್ನ ಪತ್ನಿಗೂ ಸಹ ಮೋಸ ಮಾಡಿದ್ದಾನೆ. ತಾನು ನಾಯಕ್ ಸುಬೇದಾರ್ ಎಂದು ನಂಬಿಸಿದ್ದನು. ಇಂದು ತನ್ನ ಪತಿ ಸೈನಿಕ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಪತ್ನಿ ಫುಲ್ ಶಾಕ್ ಆಗಿದ್ದಾಳೆ.
ಮಂಜುನಾಥ್ ರೆಡ್ಡಿ ವಿರುದ್ಧ ಹಾವೇರಿ ಜಿಲ್ಲೆಯ ಸವಣೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆಗೆ ಒಳಗಾದವರೇ ಇಂದು ಮಂಜುನಾಥ್ ರೆಡ್ಡಿಯನ್ನ ಹಿಡಿದು ಹರಿಹರ ಪೊಲೀಸರಿಗೆ ಒಪ್ಪಿಸಿದ್ದಾರೆ. ಹರಿಹರ ಪೊಲೀಸರು ಆರೋಪಿ ಮಂಜುನಾಥ್ ರೆಡ್ಡಿಯನ್ನು ಹಾವೇರಿ ಜಿಲ್ಲೆಯ ಸವಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv