ಬೆಂಗಳೂರು: ಸರ್ಕಾರ ಹಾಲು ಉತ್ಪಾದಕರ 657 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರ ಜೊತೆ ಈಗ ಬೆಲೆ ಏರಿಕೆ ಪರ್ವ ಆರಂಭಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N. Ravikumar) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನೆಲಕಚ್ಚಿದೆ. ಸಿಎಂ, ಡಿಸಿಎಂ ಫೈಟ್ ನಡೆಯುತ್ತಿದೆ. ಈ ನಡುವೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ದೆಹಲಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ – ಸಚಿವ ಜಮೀರ್
ಜು.3ರಂದು ಸಿಎಂ ಮನೆಗೆ ಮುತ್ತಿಗೆ:
ವಾಲ್ಮೀಕಿ ನಿಗಮದ ಅವ್ಯವಹಾರ (Valmiki Corp scam) ವಿಚಾರವಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ನಿಗಮದಲ್ಲೇ ಅವ್ಯವಹಾರ ಆಗಿದೆ. ಕೂಡಲೇ ದದ್ದಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಬಗ್ಗೆ ಶರಣ ಪ್ರಕಾಶ್ ಪಾಟೀಲ್ ಅವರ ಕಚೇರಿಯಲ್ಲಿಯೇ ಸಭೆ ನಡೆದಿದೆ. ಅವರೂ ಕೂಡ ರಾಜೀನಾಮೆ ನೀಡಬೇಕು. ಅವ್ಯವಹಾರದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಇದೇ ವಿಚಾರವಾಗಿ ನಮ್ಮ ಶಾಸಕರು ಜು.3ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಗದಗದಲ್ಲಿ ಸರಗಳ್ಳತನ ಮಾಡ್ತಿದ್ದ ಅಮ್ಜದ್ ಅಲಿ ಹಾಗೂ ಸಹಚರರಿಂದ ಪೊಲೀಸರ ಮೇಲೆ ಹಲ್ಲೆ ನಡೆದ ವಿಚಾರವಾಗಿ, ನಾಲ್ಕು ಜನ ಪೊಲೀಸರ ಮೇಲೆ ಹಲ್ಲೆಯಾಗಿದೆ. ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮ್ಜದ್ ಅಲಿ ರಕ್ಷಣೆ ಮಾಡುವ ಕೆಲಸ ನಡೆದಿದೆ. ಇದರ ಹಿಂದೆ ಸರ್ಕಾರ ಇದೆಯಾ? ಎಸ್ಪಿ ಇದ್ದಾರಾ? ಯಾರಿದ್ದಾರೆ ಗೊತ್ತಿಲ್ಲ. ಒಟ್ಟಾರೆ ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಜು.4ರಂದು ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯ ತೆಗೆದುಕೊಳ್ಳಲಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದೆ. ಮೋದಿಯವರಿಗೆ ಅಭಿನಂದನೆ ಸಲ್ಲಿಸಲಿದ್ದೇವೆ. ಎರಡನೇಯದಾಗಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ. ಬೆಲೆ ಏರಿಕೆ, ಆಡಳಿತ ವೈಫಲ್ಯ, ಭ್ರಷ್ಟಾಚಾರ, ಸಿಎಂ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಿಸಬಾರದು ಎಂದು ನಿರ್ಣಯ ಮಾಡಲಿದ್ದೇವೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ನಾಲ್ಕು ಜನ ಕೇಂದ್ರದ ಸಚಿವರೂ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
1 ಕೋಟಿ ಲೀಟರ್ ಹಾಲು ಉತ್ಪಾದನೆ: ಸಿಎಂ
ಹಾಲಿನ ದರದ ಬಗ್ಗೆ ಜೂ.29ರಂದು ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah), ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ ರೂ.3 ಹೆಚ್ಚಳ ನೀಡುತ್ತಿರುವುದು. ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವುದು ಈ ಎಲ್ಲಾ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್‌ಗೆ ತಲುಪಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು: ಪರಂ