ಹಾಸನ: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ 50 ಅಡಿ ಆಳದ ಗುಂಡಿಗೆ ಬಿದ್ದ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ರಸ್ತೆಯ ಕೂಡಿಗೆ ಬಳಿ ನಡೆದಿದೆ.
ರಾಜಘಟ್ಟ ಗ್ರಾಮದ ಯೋಗರಾಜ್ ಎಂಬುವವರಿಗೆ ಹಾಲಿನ ಲಾರಿ ಸೇರಿದ್ದು, ಬೇಲೂರು ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 96 ಹಾಲಿನ ಕ್ಯಾನ್ ಗಳನ್ನು ಲಾರಿಯಲ್ಲಿ ತುಂಬಿಕೊಂಡು ಬರುತ್ತಿದ್ದರು. ತಾಂತ್ರಿಕ ದೋಷದಿಂದ ಲಾರಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ಸದ್ಯ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನೂ ಹಾಲಿನ ಕ್ಯಾನ್‍ಗಳು ಬೀದಿಯಲ್ಲಿ ಬಿದಿದ್ದು, ಸ್ಥಳೀಯರು ಅದನ್ನು ಬೇರೆ ವಾಹನಕ್ಕೆ ತುಂಬಿಸಲು ಸಹಾಯ ಮಾಡಿದ್ದಾರೆ.
ಸದ್ಯ ಬೇಲೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.