– ತೆರೆಯ ಅಂಚಿಗೆ ಮಿಗ್-21; ಬೀಳ್ಕೊಡುಗೆ ನೀಡಲು ಭಾರತೀಯ ಸೇನೆ ಸಜ್ಜು
ಯುದ್ಧಗಳಲ್ಲಿ ಪ್ರವೀಣ, ಎದುರಾಳಿಗಳಿಗೆ ಸಿಂಹಸ್ವಪ್ನ, ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ 40ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ‘ಮಿಗ್ 21’ ಯುದ್ಧ ವಿಮಾನ ಇನ್ನು ನೆನಪಷ್ಟೇ. 60 & 70ರ ದಶಕದಲ್ಲಿ ಈ ಫೈಟರ್ ಜೆಟ್‌ಗೆ ಸರಿಸಾಟಿಯೇ ಇರಲಿಲ್ಲ. ಹಲವು ಯುದ್ಧಗಳಲ್ಲಿ ಭಾರತಕ್ಕೆ ವಿಜಯಮಾಲೆ ತಂದುಕೊಟ್ಟಿದೆ. ಇಷ್ಟೆಲ್ಲಾ ಸಾಮರ್ಥ್ಯ ಹೊಂದಿದ್ದ ಮಿಗ್ 21 (MIG 21) ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಗಳಿಸಿತ್ತು. ಹಲವು ಪೈಲಟ್‌ಗಳ ಸಾವಿಗೆ ಕಾರಣವಾಗಿತ್ತು. ತನ್ನ ಸಾಮರ್ಥ್ಯ, ತಂತ್ರಜ್ಞಾನದ ಕಾರಣ ಇಲ್ಲಿವರೆಗೂ ಇದ್ದು ಯುದ್ಧದಲ್ಲಿ ಇದ್ದು ತನ್ನದೇ ಆದ ಕೊಡುಗೆ ನೀಡಿದೆ. ಈಗ ಇತಿಹಾಸದ ಪುಟ ಸೇರಲು ಸಜ್ಜಾಗಿದೆ.
ಏನಿದು ಮಿಗ್ 21 ಯುದ್ಧ ವಿಮಾನ? ಇದರ ಇತಿಹಾಸ ಏನು? ಯುದ್ಧಗಳಲ್ಲಿ ಇದರ ಸಾಮರ್ಥ್ಯ ಹೇಗಿತ್ತು? ಹಾರುವ ಶವಪೆಟ್ಟಿಗೆ (Flying Coffin) ಅನ್ನೋ ಕುಖ್ಯಾತಿ ಯಾಕೆ? ಈಗ ನಿವೃತ್ತಿ ಹಂತಕ್ಕೆ ಬಂದಿರೋದ್ಯಾಕೆ? ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ. ಇದನ್ನೂ ಓದಿ: MIG-21 ಫೈಟರ್ ಜೆಟ್ ಹಾರಾಟ ಬಂದ್ – IAF ಮಹತ್ವದ ನಿರ್ಧಾರ
ಗುಡ್‌ಬೈ ಮಿಗ್ 21
ಭಾರತೀಯ ವಾಯುಪಡೆಯ ಮಿಗ್-21ಗೆ ಈಗ ನಿವೃತ್ತಿ ಸಮಯ. ಭಾರತ ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡಿದ್ದರೂ, ಹಲವಾರು ಮಾರಕ ಅಪಘಾತಗಳಿಂದಾಗಿ ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಯನ್ನೂ ಹೊಂದಿತ್ತು. ರಷ್ಯಾ ಮೂಲದ ಮಿಗ್-21 ಯುದ್ಧ ವಿಮಾನಗಳನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ಕೈಬಿಡಲಾಗುವುದು. ಭಾರತೀಯ ವಾಯುಪಡೆಯು ಸೆಪ್ಟೆಂಬರ್ 19 ರಂದು ಚಂಡೀಗಢ ವಾಯುನೆಲೆಯಲ್ಲಿ ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನಕ್ಕೆ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಿದೆ.
ಏನಿದು ಮಿಗ್ 21 ಯುದ್ಧ ವಿಮಾನ?
ಭಾರತೀಯ ವಾಯುಪಡೆ (ಐಎಎಫ್) ಹಾರಿಸುವ ಆರು ಯುದ್ಧ ವಿಮಾನಗಳಲ್ಲಿ ಮಿಗ್-21 ವಿಮಾನಗಳು ಸೇರಿವೆ. ಬಹಳ ಹಿಂದಿನಿಂದಲೂ ಐಎಎಫ್‌ನ ಬೆನ್ನೆಲುಬಾಗಿವೆ. ಮಿಗ್-21 ವಿಮಾನಗಳು ಒಂದೇ ಎಂಜಿನ್, ಒಂದೇ ಆಸನದ ಬಹುಪಾತ್ರದ ಯುದ್ಧ ವಿಮಾನ. ಅವುಗಳನ್ನು ಮೊದಲು 1963 ರಲ್ಲಿ ಇಂಟರ್‌ಸೆಪ್ಟರ್ ವಿಮಾನವಾಗಿ ಸೇರಿಸಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಯುದ್ಧ ವಿಮಾನವು ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹಲವು ಬಾರಿ ಪರಿಷ್ಕರಿಸಲಾಯಿತು.
ಭಾರತವು ಟೈಪ್-77, ಟೈಪ್-96 ಮತ್ತು ಬಿಐಎಸ್‌ನಂತಹ ವಿವಿಧ ಶ್ರೇಣಿಯ 800 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ಖರೀದಿಸಿದೆ. ಅವುಗಳಲ್ಲಿ ಇತ್ತೀಚಿನದು ಮಿಗ್-21 ಬೈಸನ್, ಇದು ಸುಧಾರಿತ ಕ್ಷಿಪಣಿಗಳು, ರಾಡಾರ್‌ಗಳು ಮತ್ತು ಉತ್ತಮ ಏವಿಯಾನಿಕ್ಸ್ ಹೊಂದಿರುವ ನವೀಕರಿಸಿದ ವಿಮಾನವಾಗಿದೆ. ಐಎಎಫ್‌ನೊಂದಿಗೆ 100 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು 2006 ರಿಂದ ಬೈಸನ್‌ಗೆ ಉನ್ನತೀಕರಿಸಲಾಗಿದೆ. ಭಾರತ ನಡೆಸಿದ ಹಲವಾರು ಯುದ್ಧಗಳಲ್ಲಿ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದನ್ನೂ ಓದಿ: ಪಾಕಿನ F-16 ಯುದ್ಧ ವಿಮಾನವನ್ನು ಭಾರತ ಹೊಡೆದು ಹಾಕಿದ್ಯಾ?
ಪಾಕ್ ಫೈಟರ್ ಜೆಟ್ ಹೊಡೆದುರುಳಿಸಿತ್ತು ಮಿಗ್ 21
1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮಿಗ್-21 ಗಳು (ಟೈಪ್ 77 ಶ್ರೇಣಿ) ಭಾರತ ಮೇಲುಗೈ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದವು. 1965 ರ ಯುದ್ಧ ಮತ್ತು 1999 ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಸಂಘರ್ಷದಲ್ಲಿ ಈ ಫೈಟರ್ ಜೆಟ್ ಐಎಎಫ್‌ನ ಪ್ರಮುಖ ಭಾಗವಾಗಿತ್ತು. 2019 ರಲ್ಲಿ ಶ್ರೀನಗರ ಮೂಲದ 51ನೇ ಸಂಖ್ಯೆಯ ಸ್ಕ್ವಾಡ್ರನ್‌ನ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ (ಆಗ ವಿಂಗ್ ಕಮಾಂಡರ್ ಆಗಿದ್ದರು) ಮಿಗ್ -21 ಬೈಸನ್ ಅನ್ನು ಹಾರಿಸುತ್ತಿದ್ದಾಗ, ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು.
ಭಾರತವು ಮಿಗ್-21 ಫೈಟರ್ ಜೆಟ್‌ಗಳ ಅತಿದೊಡ್ಡ ನಿರ್ವಾಹಕ ರಾಷ್ಟ್ರವಾಗಿದೆ. ಮಿಗ್-21 ಎಲ್ಲಾ ಬಗೆಯ ಹವಾಮಾನಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. 1971ರ ಯುದ್ಧದ ಸಂದರ್ಭದಲ್ಲಿ ಪಾಕ್ ವಾಯುನೆಲೆ ಮೇಲೆ 500 ಕೆಜಿ ಭಾರದ ಬಾಂಬ್‌ನ ಸುರಿಮಳೆಗೈದು ಮಿಗ್-21 ಪ್ರಮುಖ ಪಾತ್ರ ವಹಿಸಿತ್ತು.
ಹಾರುವ ಶವಪೆಟ್ಟಿಗೆ ಕುಖ್ಯಾತಿ ಯಾಕೆ?
ಕಳೆದ 60 ವರ್ಷಗಳಲ್ಲಿ 500 ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿದ್ದು, 170 ಕ್ಕೂ ಹೆಚ್ಚು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. 2010 ರಿಂದ 20 ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿವೆ. 1963 ರಲ್ಲಿ ಫೈಟರ್ ಜೆಟ್ ಸೇರ್ಪಡೆಯ ಮೊದಲ ವರ್ಷದಲ್ಲೇ ಸೋವಿಯತ್ ಯುಗದ ಎರಡು ವಿಮಾನಗಳು ಅಪಘಾತಕ್ಕೀಡಾಗಿದ್ದವು. 2023ರ ಮೇ ತಿಂಗಳಲ್ಲಿ IAFನ ಮಿಗ್-21 ಫೈಟರ್ ಜೆಟ್ ರಾಜಸ್ಥಾನದ ಸೂರತ್‌ಗಢ ಬಳಿ ನಿಯಮಿತ ಕಾರ್ಯಾಚರಣೆಯ ತರಬೇತಿ ಹಾರಾಟದಲ್ಲಿದ್ದಾಗ ಅಪಘಾತಕ್ಕೀಡಾಯಿತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ವಿಮಾನದ ಅವಶೇಷಗಳು ರಾಜ್ಯದ ಹನುಮಾನ್‌ಗಢ ಜಿಲ್ಲೆಯ ಬಹ್ಲೋಲ್ ನಗರದಲ್ಲಿರುವ ಮನೆಯ ಮೇಲೆ ಬಿದ್ದು ಮೂವರು ನಾಗರಿಕರು ಸಾವನ್ನಪ್ಪಿದರು.
2022ರ ಜುಲೈನಲ್ಲಿ ತರಬೇತಿ ನಡೆಸುತ್ತಿದ್ದ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. 2021 ರಲ್ಲಿ ಐದು MiG-21 ಬೈಸನ್ ಅಪಘಾತಗಳು ಮೂವರು ಪೈಲಟ್‌ಗಳನ್ನು ಬಲಿ ತೆಗೆದುಕೊಂಡವು. ಅಪಘಾತಗಳಿಗೆ ಹಲವಾರು ಕಾರಣಗಳಿವೆ. ತಾಂತ್ರಿಕ ದೋಷಗಳು, ಮಾನವ ದೋಷ, ಪಕ್ಷಿ ಡಿಕ್ಕಿ ಅಥವಾ ಕೆಲವು ಸಂದರ್ಭಗಳಲ್ಲಿ ಪೈಲಟ್‌ಗಳ ಅಚಾತುರ್ಯದ ಕಾರ್ಯಗಳು ಪ್ರಮುಖ ಕಾರಣವಾಗಿವೆ.
ವಿಮಾನವನ್ನು ಹಂತ ಹಂತವಾಗಿ ತೆಗೆದುಹಾಕುವ ಯೋಜನೆ ಏನು?
ಐಎಎಫ್‌ನಲ್ಲಿ ಪ್ರಸ್ತುತ ಮೂರು ಮಿಗ್-21 ವಿಮಾನಗಳ ಸ್ಕ್ವಾಡ್ರನ್‌ಗಳು ಸೇವೆಯಲ್ಲಿವೆ. ಪ್ರತಿ ಸ್ಕ್ವಾಡ್ರನ್ ಒಂದು ಅಥವಾ ಎರಡು ತರಬೇತುದಾರ ಆವೃತ್ತಿಗಳನ್ನು ಹೊರತುಪಡಿಸಿ 16-18 ವಿಮಾನಗಳನ್ನು ಒಳಗೊಂಡಿದೆ. 2022ರ ಸೆಪ್ಟೆಂಬರ್‌ನಲ್ಲಿ ಶ್ರೀನಗರ ಮೂಲದ ನಂ 51 ಸ್ಕ್ವಾಡ್ರನ್ ಅನ್ನು ನಿವೃತ್ತಿಗೊಳಿಸಲಾಯಿತು. ಮೂರು ಮಿಗ್-21 ಬೈಸನ್ ಸ್ಕ್ವಾಡ್ರನ್‌ಗಳನ್ನು ಈಗ ಹಂತ ಹಂತವಾಗಿ ಸೇವೆಯಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ಪಾಕ್ ವಶದಲ್ಲಿದ್ದ ‘ಸಿಂಗಂ’ ವಿಂಗ್ ಕಮಾಂಡರ್ ತಾಯ್ನಾಡಿಗೆ ವಾಪಸ್ – ಭಾರತದ ಗೆಲುವಿಗೆ 5ರ ಸಂಭ್ರಮ
ಐಎಎಫ್ ಮಿಗ್ 21 ವಿಮಾಗಳನ್ನು ಮುಂದುವರಿಸಿದ್ದೇಕೆ?
ಐಎಎಫ್‌ನ ಸ್ಕ್ವಾಡ್ರನ್ ಬಲವು 42 ಆಗಿದೆ. ಯುದ್ಧ ವಿಮಾನಗಳನ್ನು ಮೊದಲೇ ಹೊರಹಾಕುವುದರಿಂದ ಐಎಎಫ್‌ನ ಫೈಟರ್ ಸ್ಕ್ವಾಡ್ರನ್ ಬಲವು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ. ‘ಈ ಫೈಟರ್ ಜೆಟ್ ಹಾರಾಟದ ಸಮಯ ಮತ್ತು ಸೇವೆಯಲ್ಲಿರುವ ವರ್ಷಗಳನ್ನು ಮುಖ್ಯವಾಗಿಟ್ಟುಕೊಂಡು ನೋಡುವುದಾದರೆ ಕಳಪೆ ಸುರಕ್ಷತಾ ದಾಖಲೆ ಹೊಂದಿಲ್ಲ’ ಎಂದು ಹಿರಿಯ ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಗ್ 21 ಸೇರ್ಪಡೆ ಇತಿಹಾಸವೇನು?
1963 ರಲ್ಲಿ ಐಎಎಫ್‌ನಲ್ಲಿ ಸೂಪರ್‌ಸಾನಿಕ್ ವಿಮಾನವನ್ನು ಸೇರಿಸುವುದು ತುರ್ತು ಅಗತ್ಯವಾಗಿತ್ತು. 1962 ರ ಚೀನಾದೊಂದಿಗಿನ ಯುದ್ಧ ಮತ್ತು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಸಂದರ್ಭದಲ್ಲಿ ಯುಎಸ್‌ಎ ತನ್ನ ಹೊಸ ವಿಮಾನಗಳಲ್ಲಿ ಒಂದಾದ ಎಫ್-104 ಸ್ಟಾರ್‌ಫೈಟರ್ ಅನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಈ ಬೆಳವಣಿಗೆ ಭಾರತದಲ್ಲಿ ಆತಂಕ ಮೂಡಿಸಿತ್ತು.
ಐಎಎಫ್ ಕೂಡ ಎಫ್-104 ವಿಮಾನಗಳನ್ನು ಬಯಸಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲು ಯುಎಸ್ ಹೆಚ್ಚು ಆಸಕ್ತಿ ತೋರಲಿಲ್ಲ. ನಂತರ ರಷ್ಯಾದಿಂದ ಮಿಗ್-21 ಫೈಟರ್ ಜೆಟ್ ತರಿಸಿಕೊಳ್ಳಲಾಯಿತು. ಮೊದಲ ಆರು ಮಿಗ್-21 ವಿಮಾನಗಳು 1963ರ ಏಪ್ರಿಲ್‌ನಲ್ಲಿ ಚಂಡೀಗಢಕ್ಕೆ ಆಗಮಿಸಿದವು. ಪೈಲಟ್‌ಗಳು ಪರೀಕ್ಷಾರ್ಥ ಹಾರಾಟ ನಡೆಸಿದರು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್
ವಿವಾದ ಏನು?
2001 ರಲ್ಲಿ ಸೂರತ್‌ಗಢದಲ್ಲಿ ಸಂಭವಿಸಿದ ಮಿಗ್-21 ಅಪಘಾತದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಗಾಡ್ಗಿಲ್ ಸಾವನ್ನಪ್ಪಿದರು. ಪೈಲಟ್‌ನ ತಾಯಿ ಕವಿತಾ ಗಾಡ್ಗಿಲ್ ಅವರು, ವಿಮಾನದಲ್ಲಿ ತಾಂತ್ರಿಕ ದೋಷಗಳಿವೆ. ಆದರೆ, ಅಪಘಾತಕ್ಕೆ ನನ್ನ ಮಗನನ್ನು ತಪ್ಪಾಗಿ ದೂಷಿಸಲಾಗುತ್ತಿದೆ ಎಂದು ಹೇಳಿದಾಗ ವಿವಾದ ಉಂಟಾಯಿತು. ಐಎಎಫ್‌ನ ಆಗಿನ ಇನ್ಸ್ಪೆಕ್ಟರ್ ಜನರಲ್ ಆಫ್ ಫ್ಲೈಟ್ ಸೇಫ್ಟಿ ಆಗಿದ್ದ ಏರ್ ಮಾರ್ಷಲ್ ಅಶೋಕ್ ಗೋಯಲ್ ಪತ್ರ ಬರೆದು, ನಿಮ್ಮ ಹೇಳಿಕೆಗಳಿಂದ ಐಎಎಫ್‌ನ ಸ್ಥೈರ್ಯ ಕುಗ್ಗುತ್ತದೆ ಎಂದಿದ್ದರು.